HomeIndiaಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು ; ಕೋಚಿಂಗ್ ಸೆಂಟರ್ ಪುಸ್ತಕದ ಎಡವಟ್ಟಿಗೆ ನೆಟ್ಟಿಗರ...

ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು ; ಕೋಚಿಂಗ್ ಸೆಂಟರ್ ಪುಸ್ತಕದ ಎಡವಟ್ಟಿಗೆ ನೆಟ್ಟಿಗರ ಆಕ್ರೋಶ !

ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ ಟ್ಯಾಗೋರ್ ಮತ್ತು ಮಂಗಲ್ ಪಾಂಡೆಯಂತಹ ಐತಿಹಾಸಿಕ ಮಹಾಪುರುಷರ ಸಾಲಿನಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೂ ‘ಸ್ವಾತಂತ್ರ್ಯ ಹೋರಾಟಗಾರ’ ಎಂದು ಮುದ್ರಿಸಿರುವ ಅಚ್ಚರಿಯ ಪ್ರಮಾದವೊಂದು ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್ ಪುಸ್ತಕದಲ್ಲಿ ಬೆಳಕಿಗೆ ಬಂದಿದೆ. ಈ ವಿಚಿತ್ರ ಎಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ನೆಟ್ಟಿಗರು ಶಿಕ್ಷಣ ಕ್ಷೇತ್ರದ ಈ ಅಧ್ವಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೂರು ವರ್ಷಗಳ ನಂತರ, ಅಂದರೆ 1950ರ ಸೆಪ್ಟೆಂಬರ್ 17 ರಂದು ಜನಿಸಿದ ನರೇಂದ್ರ ಮೋದಿ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜನಿಸಿದ ಭಾರತದ ಮೊದಲ ಪ್ರಧಾನಿ ಎಂಬ ಇತಿಹಾಸ ಹೊಂದಿದ್ದಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಪುಸ್ತಕವೊಂದರಲ್ಲಿ ಇವರನ್ನು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸೇರಿಸಿರುವುದು ಭಾರೀ ವಿವಾದಕ್ಕೆ ನಾಂದಿ ಹಾಡಿದೆ.

ಪುಸ್ತಕದಲ್ಲೇನಿದೆ ? ಘೋಷಣೆಗಳೂ ಅದಲು-ಬದಲು !

ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಕರಾದ ‘ಶಿವಾಂತ್ ಸರ್’ ಅವರಿಗೆ ಸಂಬಂಧಿಸಿದೆ ಎನ್ನಲಾದ ಪುಸ್ತಕದ ಪುಟವೊಂದರ ವಿಡಿಯೋ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಪ್ರಸಿದ್ಧ ಘೋಷಣೆಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಸೇರಿಸಲಾಗಿದೆ. ಜೊತೆಗೆ ಅವರ ಹೇಳಿಕೆಗಳೆಂದು “ಮೈ ಭೀ ಚೌಕೀದಾರ್”, “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅನುಸಂಧಾನ” ಎಂಬ ಘೋಷಣೆಗಳನ್ನು ಉಲ್ಲೇಖಿಸಲಾಗಿದೆ. (ವಾಸ್ತವದಲ್ಲಿ “ಜೈ ಜವಾನ್ ಜೈ ಕಿಸಾನ್” ಘೋಷಣೆಯನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನೀಡಿದ್ದರು, ನಂತರ ವಾಜಪೇಯಿ ಅವರು ‘ಜೈ ವಿಜ್ಞಾನ್’ ಸೇರಿಸಿದ್ದರು).

‘ಇದು ಹಾಸ್ಯವಲ್ಲ, ಆತಂಕಕಾರಿ’: ನೆಟ್ಟಿಗರ ತೀವ್ರ ಆಕ್ರೋಶ:

ಈ ಪೋಸ್ಟ್ ಹರಿದಾಡುತ್ತಿದ್ದಂತೆ ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ (ಟ್ವಿಟರ್) ಭಾರಿ ಟೀಕೆಗಳು ವ್ಯಕ್ತವಾಗಿವೆ.

ಬ್ರೈನ್‌ವಾಶ್ ಆರೋಪ: “1950ರಲ್ಲಿ ಜನಿಸಿದ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಗೆ ತುರುಕಿ ಮಕ್ಕಳಿಗೆ ಬ್ರೈನ್‌ವಾಶ್ ಮಾಡುವ ಮಟ್ಟಕ್ಕೆ ದೇಶ ಹೋಗಿದೆ. ಇದು ತಮಾಷೆಯ ವಿಷಯವಲ್ಲ, ಅತ್ಯಂತ ಆತಂಕಕಾರಿ ಬೆಳವಣಿಗೆ. ದೇಶ ಉತ್ತರ ಕೊರಿಯಾದ ಹಾದಿಯತ್ತ ಸಾಗುತ್ತಿರುವ ಲಕ್ಷಣವಿದು” ಎಂದು ಓರ್ವ ಬಳಕೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸದ ಮೇಲೆ ಜುಮ್ಲಾ: ಮತ್ತೊಬ್ಬ ನೆಟ್ಟಿಗ, “ಇದು ಇತಿಹಾಸದ ಮೇಲೆ ಪ್ರಯೋಗಿಸಿದ ಮತ್ತೊಂದು ಜುಮ್ಲಾ. ಸರ್ಕಾರಿ ಮುದ್ರೆ ಒತ್ತಿದ ಆತ್ಮಚರಿತ್ರೆಯಂತಿದೆ ಈ ಪುಸ್ತಕ” ಎಂದು ವ್ಯಂಗ್ಯವಾಡಿದ್ದಾರೆ.

ಹಿಟ್ಲರ್ ಕಾಲದ ಪ್ರಚಾರ ಪುಸ್ತಕಗಳಿಗೆ ಕೆಲವರು ಇದನ್ನು ಹೋಲಿಸಿದ್ದರೆ, ಇನ್ನು ಹಲವರು ದೇಶದ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಮತ್ತು ಕೋಚಿಂಗ್ ಸೆಂಟರ್‌ಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ನೈಜ ಹೋರಾಟಗಾರರ ಇತಿಹಾಸವನ್ನು ತಿರುಚಿ, ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡುತ್ತಿರುವ ಇಂತಹ ಬೇಜವಾಬ್ದಾರಿ ಪುಸ್ತಕಗಳು ಮತ್ತು ಸಂಸ್ಥೆಗಳ ವಿರುದ್ಧ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular