HomeIndiaInstagram ರೀಲ್ಸ್‌ಗಾಗಿ ಹುಚ್ಚಾಟ ; ಪುಂಡರಿಗೆ ಬಿಸಿ ಮುಟ್ಟಿಸಿದ ಪೊಲೀಸರು | Watch

Instagram ರೀಲ್ಸ್‌ಗಾಗಿ ಹುಚ್ಚಾಟ ; ಪುಂಡರಿಗೆ ಬಿಸಿ ಮುಟ್ಟಿಸಿದ ಪೊಲೀಸರು | Watch

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಿಟ್ಟಿಸಿಕೊಳ್ಳಲು ಇಂದಿನ ಯುವಪೀಳಿಗೆ ಎಷ್ಟರಮಟ್ಟಿಗೆ ಹುಚ್ಚಾಟ ಮೆರೆಯುತ್ತಿದೆ ಎಂಬುದಕ್ಕೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಘಟನೆಯೇ ಸಾಕ್ಷಿ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿ, ಒಂದೇ ಸ್ಕೂಟರ್‌ನಲ್ಲಿ ಐವರು ಕುಳಿತು ಸಿನಿಮೀಯ ಶೈಲಿಯ ಅಪಾಯಕಾರಿ ಸ್ಟಂಟ್ ಮಾಡಿದ್ದ ಯುವಕರ ಗ್ಯಾಂಗ್‌ಗೆ ಕೊನೆಗೂ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕೂಟರ್ ಚಾಲನೆ ಮಾಡುತ್ತಿದ್ದ ಅದ್ನಾನ್ ಪಠಾಣ್ ಎಂಬಾತನ ವಿರುದ್ಧ ಕ್ಯಾಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದೆ.

ಸ್ಕೂಟರ್‌ನಲ್ಲಿ ಐವರು, ಗಾಳಿಯಲ್ಲಿ ತೂಗಾಡಿದ ಯುವಕ

ವೈರಲ್ ಆದ ವಿಡಿಯೋದ ಪ್ರಕಾರ, ಸೆಪ್ಟೆಂಬರ್ 1ರ ಮಧ್ಯಾಹ್ನ ಪಂಚಕ್ಕಿ-ಔರಂಗಪುರ ರಸ್ತೆಯಲ್ಲಿ ಈ ಪುಂಡಾಟಿಕೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಹನ ದಟ್ಟಣೆಯಿದ್ದ ರಸ್ತೆಯಲ್ಲಿ ಐವರು ಯುವಕರು ಒಂದೇ ಸ್ಕೂಟರ್ ಏರಿದ್ದರು. ಸ್ಕೂಟರ್ ಸವಾರ ಸೇರಿದಂತೆ ನಾಲ್ವರು ಆಸನದ ಮೇಲೆ ಕುಳಿತಿದ್ದರೆ, ಮತ್ತೊಬ್ಬ ಯುವಕನನ್ನು ಉಳಿದ ನಾಲ್ವರು ಹಿಡಿದುಕೊಂಡು ಗಾಳಿಯಲ್ಲಿ ತೇಲುವಂತೆ ಹಿಡಿದಿದ್ದರು.

ಸವಾರ ಹೆಲ್ಮೆಟ್ ಧರಿಸದೆ, ಅತಿಯಾದ ವೇಗದಲ್ಲಿ ಮತ್ತು ಅಪಾಯಕಾರಿಯಾಗಿ ಸ್ಕೂಟರ್ ಚಲಾಯಿಸುತ್ತಾ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಈ ಸಾಹಸವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ. ಇದು ರಸ್ತೆಯಲ್ಲಿದ್ದ ಇತರ ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಭೀತಿ ಹುಟ್ಟಿಸಿತ್ತು.

ಪೊಲೀಸ್ ದೂರು ಮತ್ತು ಎಫ್‌ಐಆರ್ ದಾಖಲು

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಹೆಡ್ ಕಾನ್‌ಸ್ಟೇಬಲ್ ಮಹಾಶಂಖ್ ನಾಮದೇವ್‌ರಾವ್ ದಾಂಡಗೆ ಅವರು ದೂರು ದಾಖಲಿಸಿದರು. ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವುದು, ಮಿತಿಮೀರಿದ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆಗಾಗಿ ಅದ್ನಾನ್ ಪಠಾಣ್ ವಿರುದ್ಧ ಸೆಪ್ಟೆಂಬರ್ 4ರ ರಾತ್ರಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದರು.

ಕ್ಯಾಮೆರಾ ಮುಂದೆ ಕೈಮುಗಿದು ಕ್ಷಮೆಯಾಚಿಸಿದ ಸವಾರ

ಪೊಲೀಸ್ ಕೇಸ್ ದಾಖಲಾಗುತ್ತಿದ್ದಂತೆ ಬೆದರಿದ ಸ್ಕೂಟರ್ ಸವಾರ ಅದ್ನಾನ್ ಪಠಾಣ್, ಕ್ಯಾಮೆರಾ ಮುಂದೆ ಕೈಮುಗಿದು ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ್ದಾನೆ.

“ನಾವು ಐವರು ಸೇರಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಸ್ಕೂಟರ್‌ನಲ್ಲಿ ಈ ರೀತಿ ಮಾಡಿದ್ದು ನಿಜ. ನಾವು ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದೆವು, ಇದು ನಮ್ಮಿಂದಾದ ದೊಡ್ಡ ತಪ್ಪು. ನಮ್ಮ ತಪ್ಪಿಗೆ ತಕ್ಕಂತೆ ನಮಗೆ ಶಿಕ್ಷೆಯೂ ಆಗಿದೆ,” ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಮುಂದುವರಿದು ಮಾತನಾಡಿದ ಆತ, “ಈ ರೀತಿ ವಾಹನ ಚಲಾಯಿಸುವುದರಿಂದ ನಮ್ಮ ಜೀವದ ಜೊತೆಗೆ ಸಾರ್ವಜನಿಕರ ಜೀವಕ್ಕೂ ಕಂಟಕವಾಗುತ್ತದೆ. ಇನ್ಮುಂದೆ ನಮ್ಮ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಓಡಾಡುವುದಿಲ್ಲ. ಫೇಸ್‌ಬುಕ್, ವಾಟ್ಸಾಪ್ ಅಥವಾ ಇನ್‌ಸ್ಟಾಗ್ರಾಮ್‌ಗಾಗಿ ಇಂತಹ ಅಪಾಯಕಾರಿ ರೀಲ್ಸ್ ಮಾಡುವುದಿಲ್ಲ. ಹೆಲ್ಮೆಟ್ ಧರಿಸಿಯೇ ವಾಹನ ಓಡಿಸುತ್ತೇವೆ. ಎಲ್ಲರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ,” ಎಂದು ಕೈಮುಗಿದು ಮನವಿ ಮಾಡಿದ್ದಾನೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular