HomeKarnatakaಅಸಮರ್ಥ ಶಿಕ್ಷಣ ಮಂತ್ರಿ ವಿರುದ್ಧ ಕ್ರಮ ಕೈಗೊಳ್ಳದ ಮೋದಿ ದುರ್ಬಲ ಪ್ರಧಾನಿ, ವಿದ್ಯಾರ್ಥಿಗಳ ಶಾಪದಿಂದ ಕೇಂದ್ರ...

ಅಸಮರ್ಥ ಶಿಕ್ಷಣ ಮಂತ್ರಿ ವಿರುದ್ಧ ಕ್ರಮ ಕೈಗೊಳ್ಳದ ಮೋದಿ ದುರ್ಬಲ ಪ್ರಧಾನಿ, ವಿದ್ಯಾರ್ಥಿಗಳ ಶಾಪದಿಂದ ಕೇಂದ್ರ ಸರ್ಕಾರ ಪತನ: ಸಿದ್ಧರಾಮಯ್ಯ

ಬೆಂಗಳೂರು: ನೀಟ್ ಪರೀಕ್ಷೆ ಹಗರಣದ ಬಲಿಪಶು ವಿದ್ಯಾರ್ಥಿಗಳ ಶಾಂತಿಯುತ ಪ್ರತಿರೋಧದಿಂದ ನಡುಗಿಹೋಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಹತಾಶೆಯಿಂದ ಲಾಠಿ-ದೊಣ್ಣೆಗಳ ಮೂಲಕ ಪ್ರತಿಭಟನೆಯನ್ನು ದಮನಿಸಲು ಹೊರಟಿರುವುದನ್ನು ನೋಡಿದರೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಘೋಷಣೆಯಾದಂತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ನೂರಾರು ಅಮಾಯಕ ಯುವಕ-ಯುವತಿಯರು ಪೊಲೀಸರ ನಿರ್ದಯ ಲಾಠಿ ಏಟಿನಿಂದಾಗಿ ಗಾಯಗೊಂಡಿದ್ದಾರೆ. ಕೇವಲ ದೆಹಲಿಯಲ್ಲಿ ಮಾತ್ರವಲ್ಲ, ಕರ್ನಾಟಕವೂ ಸೇರಿದಂತೆ ಇಡೀ ದೇಶದಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಮತ್ತು ಯುವಜನ ವಿರೋಧಿ ನೀತಿಯ ವಿರುದ್ಧ ಯುವಜನರು ಸಿಡಿದೆದ್ದು ಬೀದಿಗಳಿದಿದ್ದಾರೆ. ಒಬ್ಬ ಅಸಮರ್ಥ ಮತ್ತು ಭ್ರಷ್ಟ ಶಿಕ್ಷಣ ಮಂತ್ರಿಯ ವಿರುದ್ದ ಕ್ರಮಕೈಗೊಳ್ಳಲು ಸಾಧ್ಯವಾಗದ ನರೇಂದ್ರ ಮೋದಿ ಅವರು ತಾವೊಬ್ಬ ದುರ್ಬಲ ಮತ್ತು ದುಷ್ಟರಕ್ಷಕ ಪ್ರಧಾನಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ನೊಂದ ಅಮಾಯಕ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಕಣ್ಣೀರಿನ ಶಾಪದಿಂದಲೇ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ.

ನಿರ್ಲಕ್ಷ್ಯ, ಸುಳ್ಳು ಮತ್ತು ಅಪಪ್ರಚಾರದ ಮೂಲಕ ವಿದ್ಯಾರ್ಥಿ ಮತ್ತು ಯುವಜನರ ಆಂದೋಲನವನ್ನು ದಾರಿತಪ್ಪಿಸಬಹುದೆಂಬ ಭ್ರಮೆಯಲ್ಲಿದ್ದ ಪ್ರಧಾನಿ ಮೋದಿಯವರು ಇಂದು 20,000ಕ್ಕೂ ಹೆಚ್ಚು ಯುವಜನರು ಪ್ರಾಣದ ಹಂಗುತೊರೆದು ಸಂಸತ್ ಭವನದ ಮೇಲೆರಗಲು ಸಿದ್ಧರಾಗಿ ಬಂದಾಗ ದಿಕ್ಕುತೋಚದಂತಾಗಿದ್ದಾರೆ. ಕೊನೆಗೆ ಹಿಂಸೆಯ ಮೂಲಕ ಅಹಿಂಸಾ ಹೋರಾಟವನ್ನು ಹತ್ತಿಕ್ಕಲು ಹತಾಶ ಪ್ರಯತ್ನ ನಡೆಸಿ, ಅದರಲ್ಲಿಯೂ ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹನ್ನೆರಡು ವರ್ಷಗಳ ನರೇಂದ್ರ ಮೋದಿ ಅವರ ಸರ್ಕಾರದಿಂದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾದವರು ಈ ದೇಶದ ವಿದ್ಯಾರ್ಥಿಗಳು ಮತ್ತು ಯುವಜನರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಅವರ ಸರ್ಕಾರದ ಆಡಳಿತದ ಅವಧಿಯಲ್ಲಿ ನಿರುದ್ಯೋಗದ ಪ್ರಮಾಣ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದರ ಜೊತೆಗೆ ಸಾಮಾನ್ಯವಾದ ಪರೀಕ್ಷೆಗಳನ್ನು ಕೂಡಾ ಕ್ರಮಬದ್ಧ ಹಾಗೂ ನ್ಯಾಯಯುತವಾಗಿ ನಡೆಸಲು ಸಾಧ್ಯವಾಗದಷ್ಟು ಆಡಳಿತ ಕುಲಗೆಟ್ಟು ಹೋಗಿದೆ ಎಂದು ಟೀಕಿಸಿದ್ದಾರೆ.

ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಮತ್ತು ಯುವಜನರ ಆಂದೋಲನ ಕೇವಲ ನೀಟ್ ಪರೀಕ್ಷೆಯ ಹಗರಣಕ್ಕೆ ಸೀಮಿತವಾದುದಲ್ಲ. ಕೇಂದ್ರ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಜನ ಬೇಸತ್ತಿದ್ದಾರೆ. ರಚನಾತ್ಮಕವಾದ ಟೀಕೆ-ಟಿಪ್ಪಣಿಗಳನ್ನು ಸಹಿಸಲಾಗದಷ್ಟು ಅಸೈರಣೆ ಹೊಂದಿರುವ ನರೇಂದ್ರ ಮೋದಿ ಅವರ ಸರ್ಕಾರ  ವಿರೋಧ ಪಕ್ಷಗಳ ದನಿಯನ್ನು ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗದ ಮೂಲಕ ಹತ್ತಿಕ್ಕಿದ ರೀತಿಯಲ್ಲಿಯೇ ವಿದ್ಯಾರ್ಥಿ ಆಂದೋಲನವನ್ನೂ ದಮನಿಸಲು ಹೊರಟಿರುವುದು ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ ಎಂದು ಹೇಳಿದ್ದಾರೆ

ಒಬ್ಬ ಸತ್ಯ ಮತ್ತು ನ್ಯಾಯನಿಷ್ಠ ಗಾಂಧಿವಾದಿ ಸೋನಮ್ ವಾಂಗ್ಚುಕ್ ಅವರ ಮೇಲೆ ಮೇಲೆ ಪೊಲೀಸರನ್ನು ಛೂಬಿಟ್ಟು, ಬಲಪ್ರಯೋಗದಿಂದ ಉಪವಾಸ ನಿಲ್ಲಿಸಲು ಪ್ರಯತ್ನಿಸುವ ಮೂಲಕ ದೇಶದೊಳಗೆ ಮಾತ್ರವಲ್ಲ ವಿದೇಶದಲ್ಲಿಯೂ ನರೇಂದ್ರ ಮೋದಿಯವರು ಖಂಡನೆಗೀಡಾಗಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಹುಟ್ಟಿದ ರಾಜ್ಯಕ್ಕೆ ಸೇರಿದವರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಥುರಾಮ್ ಗೋಡ್ಸೆ ಅನುಯಾಯಿಯಂತೆ ನಡೆದುಕೊಂಡಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.

ನೀಟ್ ಪರೀಕ್ಷೆ ಹಗರಣ ಮತ್ತು ದಾರಿ ತಪ್ಪಿರುವ ದೇಶದ ಒಟ್ಟು ಶಿಕ್ಷಣ ವ್ಯವಸ್ಥೆಯ ವಿರುದ್ಧ ಜನಜಾಗೃತಿಗೊಳಿಸಲು ಈಗಾಗಲೇ ಕಾಂಗ್ರೆಸ್ ಪಕ್ಷ ಬೀದಿಗಿಳಿದಿದೆ. ನಮ್ಮ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ನೀಟ್ ಪರೀಕ್ಷೆಯ ಹಗರಣದಿಂದ ನೊಂದವರ ಪರವಾಗಿ ದನಿ ಎತ್ತುವ ಕೆಲಸ ಮಾಡಬೇಕು. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಈಗಾಗಲೇ ಈ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈಗಲೂ ಕಾಲ ಮಿಂಚಿಲ್ಲ, ನೀಟ್ ಪರೀಕ್ಷೆ ಹಗರಣವೂ ಸೇರಿದಂತೆ ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ತಂದು ನಿಲ್ಲಿಸಿರುವ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣದಿಂದಲೇ ಸಂಪುಟದಿಂದ ಕಿತ್ತು ಹಾಕಬೇಕು.  ವಿದ್ಯಾರ್ಥಿ ನಾಯಕರನ್ನು ಸಮಾಲೋಚನೆಗೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರವನ್ನು ಕಲ್ಪಿಸಲು ಮುಂದಾಗಬೇಕು. ಇದೇ ರೀತಿ ಬಲಪ್ರಯೋಗದ ಮೂಲಕವೇ ಶಾಂತಿಯುತವಾದ ಪ್ರತಿರೋಧವನ್ನು ಎದುರಿಸಲು ಹೊರಟರೆ ಕೇಂದ್ರ ಸರ್ಕಾರದ ಪತನದ ದಿನ ಎಣಿಕೆ ಶುರುವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular