ಕಲಬುರಗಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಸರ್ವಾಧಿಕಾರಿ. ಎಫ್ ಸ್ಟೀನ್ ಫೈಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಬಂದಿರುವುದರಿಂದ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಗುಲಾಮರಾಗಿದ್ದಾರೆ. ಟ್ರಂಪ್ ಜೊತೆಗೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರವಿ ಇಟ್ಟಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬೆಳಗ್ಗೆ ಚಹಾ ಕುಡಿಯುವ ಸಮಯಕ್ಕೆ ಟ್ರಂಪ್ ಅವರೊಂದಿಗೆ ಮಾತನಾಡುವುದಾಗಿ ಮೋದಿ ಹೇಳುತ್ತಾರೆ. ಅಷ್ಟೊಂದು ಸ್ನೇಹ ಇದ್ದರೆ ನಮ್ಮ ದೇಶದ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಏರುತ್ತಿರುವುದೇಕೆ? ಯಾವ ದೇಶದೊಂದಿಗೆ ನಾವು ವ್ಯವಹಾರ ಮಾಡಬೇಕು ಎಂದು ಹೇಳುತ್ತಿರುವುದೇಕೆ? ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಲು ಮೋದಿಯವರಿಗೆ ಏಕೆ ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಭಾರತದ ಆಹ್ವಾನದ ಮೇರೆಗೆ ವಿಶಾಖಪಟ್ಟಣದಲ್ಲಿ ಆಯೋಜಿಸಿದ ನೌಕಾಸೇನೆ ತಾಲೀಮಿನಲ್ಲಿ ಭಾಗವಹಿಸಲು ಇರಾನ್ ನಿಂದ ಬಂದಿದ್ದ ಯುದ್ಧ ನೌಕೆಯನ್ನು ಅಮೆರಿಕಾದ ಜಲಂತಾರ್ಗಾಮಿ ಮುಳುಗಿಸಿ ಹಲವಾರು ಇರಾಕ್ ಸೈನಿಕರ ಸಾವಿಗೆ ಕಾರಣವಾಗಿದೆ. ಇಷ್ಟೊಂದು ಧೈರ್ಯ ಅವರಿಗೆ ಏಕೆ ಬಂತು? ಇದನ್ನು ಪ್ರಶ್ನಿಸುವ ಎದೆಗಾರಿಕೆ ದೇಶದ ಪ್ರಧಾನಿಗೆ ಇಲ್ಲವೇ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ವೇಳೆ ಅಮೆರಿಕದಿಂದ ಯುದ್ಧ ನೌಕೆಯನ್ನು ಕಳುಹಿಸಿ ಭಾರತವನ್ನು ಬೆದರಿಸಲು ನೋಡಿತ್ತು. ಆದರೆ ಇಂದಿರಾಗಾಂಧಿಯವರು ಬೆದರಿಕೆಗೆ ಮಣಿಯಲಿಲ್ಲ. ಮೋದಿಯವರು ಅಮೆರಿಕದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ನಮ್ಮ ವಿದೇಶಾಂಗ ನೀತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುತ್ತಿದ್ದಾರೆ. ನೆಹರು ಪ್ರಧಾನಿಯಾಗಿದ್ದಾಗ ಅಲಿಪ್ತ ನೀತಿ ಅನುಸರಿಸಿದ್ದರಿಂದ ವಿಶ್ವ ಶಾಂತಿಗೆ ಕಾರಣವಾಗಿತ್ತು. ಮೋದಿ ಇಸ್ರೇಲ್ ಗೆ ಹೋಗಿ ಕೊರಳಲ್ಲಿ ಒಂದು ಬಿಲ್ಲೆ ಹಾಕಿಕೊಂಡು ಬಂದ ನಂತರ ಇರಾನ್ ಮೇಲೆ ಇಸ್ರೇಲ್ ಬಾಂಬ್ ಹಾಕಿತು. ಇರಾನ್ ದೇಶದ ಮುಖ್ಯಸ್ಥ ಖಮೇನಿಯವರನ್ನು ಅಮೆರಿಕ -ಇಸ್ರೇಲ್ ಪಡೆಗಳು ಹತ್ಯೆ ಮಾಡಿದವು. ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶ ಶಾಂತಿಯಿಂದ ಇರುತ್ತದೆಯೇ? ವಿಶ್ವ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಭಾರತದ ಶೇಕಡ 65 ರಷ್ಟು ರೈತರು ಕೃಷಿ ಮೇಲೆ ಅವಲಂಬಿತರಾಗಿದ್ದರೆ, ಅಮೆರಿಕದಲ್ಲಿ ಶೇಕಡ 3ರಷ್ಟು ಮಾತ್ರ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ದೇಶದ ಉತ್ಪನ್ನಗಳಿಗೆ ಅಮೆರಿಕದಲ್ಲಿ ಭಾರಿ ತೆರಿಗೆ ಹಾಕುತ್ತಾರೆ. ಆದರೆ ಅಮೆರಿಕದ ಉತ್ಪನ್ನಗಳಿಗೆ ನಮ್ಮ ದೇಶದಲ್ಲಿ ತೆರಿಗೆ ಹಾಕುವಂತಿಲ್ಲ. ನಾವು ಯಾರಿಂದ ತೈಲ ಖರೀದಿಸಬೇಕು ಎಂಬುದನ್ನು ಅಮೆರಿಕವೇ ನಿರ್ಧರಿಸುವುದಾದರೆ ಮೋದಿ ಟ್ರಂಪ್ ಅವರ ಸ್ನೇಹಿತರಾಗಿ ಪ್ರಯೋಜನವೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ರಷ್ಯಾದಿಂದ ಒಂದು ತಿಂಗಳಿಗೆ ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೆರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ನಮ್ಮ ದೇಶವನ್ನೇ ಗಿರವಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

