ನವದೆಹಲಿ: ಪ್ರಸಕ್ತ 2026ನೇ ಸಾಲಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳಿಗಾಗಿ ಸರ್ಕಾರ ಸುಮಾರು ₹74.58 ಕೋಟಿ ವೆಚ್ಚ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ. ಇದೇ ವೇಳೆ, ಏಪ್ರಿಲ್ 2021 ರಿಂದ ಡಿಸೆಂಬರ್ 2025 ರ ನಡುವಿನ ಅವಧಿಯಲ್ಲಿ ಭಾರತವು ಒಟ್ಟು 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆ (FDI) ಆಕರ್ಷಿಸಿದೆ ಎಂದು ಸರ್ಕಾರ ಬಹಿರಂಗಪಡಿಸಿದೆ.
ರಾಜ್ಯಸಭಾ ಸಂಸದರಾದ ಸಂಜಯ್ ಸಿಂಗ್ ಹಾಗೂ ಡಾ. ವಿ. ಶಿವದಾಸನ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಅವರು ಆ ಆಗಸ್ಟ್ 6ರಂದು ಲಿಖಿತ ಉತ್ತರ ಸಲ್ಲಿಸಿದರು. 2021 ರಿಂದೀಚೆಗೆ ಪ್ರಧಾನಿಯವರ ಪ್ರವಾಸಗಳ ದೇಶವಾರು ಹಾಗೂ ಭೇಟಿವಾರು ವೆಚ್ಚ, ಅದರಿಂದ ಬಂದ ಎಫ್‌ಡಿಐ ಹಾಗೂ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದಗಳ ಪೂರ್ಣ ವಿವರಗಳನ್ನು ಸಂಸದರು ಕೋರಿದ್ದರು.
ಸಂಸದರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ಪ್ರವಾಸದ ವೆಚ್ಚ ಹಾಗೂ ಕೈಗೊಳ್ಳಲಾದ ಒಪ್ಪಂದಗಳ ದೇಶವಾರು ವಿವರಗಳನ್ನು ಉತ್ತರಕ್ಕೆ ಲಗತ್ತಿಸಲಾದ ಎರಡು ಪ್ರತ್ಯೇಕ ಅನುಬಂಧಗಳಲ್ಲಿ (Annexures) ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ಪ್ರವಾಸ ವೆಚ್ಚಗಳ ಹೋಲಿಕೆ
ವಿಷಯಕ್ಕೆ ಸ್ಪಷ್ಟತೆ ನೀಡುವ ನಿಟ್ಟಿನಲ್ಲಿ, ಯುಪಿಎ ಆಡಳಿತಾವಧಿಯಲ್ಲಿ ದಿವಂಗತ ಡಾ. ಮನಮೋಹನ್ ಸಿಂಗ್ ಅವರು ಕೈಗೊಂಡಿದ್ದ ಕೆಲವು ಪ್ರಮುಖ ಪ್ರವಾಸ ವೆಚ್ಚಗಳನ್ನು ಸಚಿವಾಲಯ ಸದನದ ಗಮನಕ್ಕೆ ತಂದಿದೆ. 2011ರಲ್ಲಿ ನಡೆದ ಏಕೈಕ ಅಮೆರಿಕ ಭೇಟಿಗೆ ₹10.74 ಕೋಟಿ, 2013ರ ರಷ್ಯಾ ಪ್ರವಾಸಕ್ಕೆ ₹9.96 ಕೋಟಿ, 2011ರ ಫ್ರಾನ್ಸ್ ಭೇಟಿಗೆ ₹8.33 ಕೋಟಿ ಹಾಗೂ 2013ರ ಜರ್ಮನಿ ಭೇಟಿಗೆ ₹6.02 ಕೋಟಿ ವೆಚ್ಚವಾಗಿತ್ತು.
ಆ ಕಾಲದ ಈ ಪ್ರತಿಯೊಂದು ಬಿಡಿ ಪ್ರವಾಸದ ವೆಚ್ಚವೂ, ಈ ವರ್ಷದ ಪ್ರಧಾನಿ ಮೋದಿ ಅವರ ಒಟ್ಟು ವಿದೇಶ ಪ್ರವಾಸ ವೆಚ್ಚಕ್ಕಿಂತ ಹೆಚ್ಚಾಗಿತ್ತು ಎಂದು ಸಚಿವಾಲಯ ಉಲ್ಲೇಖಿಸಿದೆ. ಈ ಹಳೆಯ ಅಂಕಿಅಂಶಗಳು ಆಯಾ ಅವಧಿಯ ನೈಜ ವೆಚ್ಚಗಳಾಗಿದ್ದು, ಪ್ರಸ್ತುತ ಹಣದುಬ್ಬರ ಅಥವಾ ದ್ರವ್ಯ ವಿನಿಮಯ ದರ ವ್ಯತ್ಯಾಸಗಳಿಗೆ ಸರಿಹೊಂದಿಸಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ರಾಜತಾಂತ್ರಿಕ ಸಂಬಂಧ ಮತ್ತು ಹೂಡಿಕೆ
ಏಪ್ರಿಲ್ 2021 ರಿಂದ ಡಿಸೆಂಬರ್ 2025 ರವರೆಗಿನ ಅವಧಿಯಲ್ಲಿ ದೇಶಕ್ಕೆ ಬಂದ ಒಟ್ಟು 381.8 ಬಿಲಿಯನ್ ಅಮೆರಿಕನ್ ಡಾಲರ್ ಎಫ್‌ಡಿಐ ಪ್ರಮಾಣವನ್ನು ಸರ್ಕಾರ ವರದಿಯಲ್ಲಿ ನಮೂದಿಸಿದೆ. ಪ್ರಧಾನಿಯವರ ಉನ್ನತ ಮಟ್ಟದ ವಿದೇಶಿ ಭೇಟಿಗಳು ಭಾರತದ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂತಹ ಪ್ರವಾಸಗಳ ವೇಳೆಯಲ್ಲಿ ನಡೆದ ಒಪ್ಪಂದಗಳು ತಂತ್ರಜ್ಞಾನ, ನಾವೀನ್ಯತೆ, ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ, ಇಂಧನ ಸಹಭಾಗಿತ್ವ ಹಾಗೂ ಪೂರೈಕೆ ಸರಪಳಿ ಸ್ಥಿರತೆಯಂತಹ ಪ್ರಮುಖ ಕ್ಷೇತ್ರಗಳನ್ನು ಬಲಪಡಿಸಲು ನೆರವಾಗಿವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಆದಾಗ್ಯೂ, ಈ 381.8 ಬಿಲಿಯನ್ ಡಾಲರ್ ಎಫ್‌ಡಿಐ ಪೈಕಿ ಎಷ್ಟು ಪ್ರಮಾಣವು ನಿರ್ದಿಷ್ಟವಾಗಿ ಪ್ರಧಾನಿಯವರ ಪ್ರವಾಸ ಅಥವಾ ಒಪ್ಪಂದಗಳಿಂದ ನೇರವಾಗಿ ಬಂದಿದೆ ಎಂಬುದನ್ನು ಪ್ರತ್ಯೇಕವಾಗಿ ವರ್ಗೀಕರಿಸಿಲ್ಲ, ಬದಲಿಗೆ ಇದನ್ನು ಆ ಅವಧಿಯಲ್ಲಿ ಹರಿದುಬಂದ ಒಟ್ಟು ಎಫ್‌ಡಿಐ ಎಂದು ಸಚಿವಾಲಯವು ಸದನಕ್ಕೆ ನೀಡಿದ ಉತ್ತರದಲ್ಲಿ ಸಲ್ಲಿಕೆ ಮಾಡಿದೆ.

