ದೇಶದಲ್ಲೇ ಮೊದಲ ಬಾರಿಗೆ ಪ್ರಧಾನಿಯೊಬ್ಬರ ಸಾರ್ವಜನಿಕ ಸಭೆಯಲ್ಲಿ ಜನರ ಭಾಗವಹಿಸುವಿಕೆಗಾಗಿ ಜನಪ್ರಿಯ ಈವೆಂಟ್ ಟಿಕೆಟಿಂಗ್ ವೇದಿಕೆ ‘ಬುಕ್‌ಮೈಶೋ’ ಮೂಲಕ ಉಚಿತ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ನೋಂದಣಿ ಆರಂಭಿಸಿದ ಕೇವಲ ಒಂದು ಗಂಟೆಯಲ್ಲೇ ಎಲ್ಲಾ ಸೀಟುಗಳು ಬುಕ್ ಆಗಿದ್ದು, ಭಾರಿ ಜನಸ್ಪಂದನೆ ವ್ಯಕ್ತವಾಗಿದೆ.
ಹೌದು.ಪ್ರಧಾನಿ ನರೇಂದ್ರ ಮೋದಿ ಅವರ ಸೆಪ್ಟೆಂಬರ್ 8ರ ವಡೋದರ ಕಾರ್ಯಕ್ರಮಕ್ಕೆ ಭರ್ಜರಿ ಜನಸ್ಪಂದನೆ ವ್ಯಕ್ತವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಬುಕ್‌ಮೈಶೋ ಮೂಲಕ ಉಚಿತ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದ್ದು, ನೋಂದಣಿ ಆರಂಭಿಸಿದ ಕೇವಲ ಒಂದು ಗಂಟೆಯಲ್ಲೇ ಎಲ್ಲಾ ಸೀಟುಗಳು ಭರ್ತಿಯಾಗಿವೆ. ಬರೋಬ್ಬರಿ 42 ಸಾವಿರಕ್ಕೂ ಹೆಚ್ಚು ಮಂದಿ ವೇಟಿಂಗ್ ಲಿಸ್ಟ್‌ಗೆ ಸೇರಿರುವುದು ಕಾರ್ಯಕ್ರಮದ ಮೇಲಿನ ಜನರ ಆಸಕ್ತಿಗೆ ಸಾಕ್ಷಿಯಾಗಿದೆ.
ಸೆಪ್ಟೆಂಬರ್ 8ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 42,000ಕ್ಕೂ ಹೆಚ್ಚು ಮಂದಿ ವೇಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಡೋದರ ನಗರದಲ್ಲಿ ₹35,000 ಕೋಟಿಗೂ ಹೆಚ್ಚು ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೆಲವು ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ನಡೆಯುವ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಈ ಕಾರ್ಯಕ್ರಮಕ್ಕಾಗಿ ವಡೋದರ ಮುನ್ಸಿಪಲ್ ಕಾರ್ಪೊರೇಷನ್ (VMC) ವಿನೂತನವಾಗಿ ಖಾಸಗಿ ಡಿಜಿಟಲ್ ವೇದಿಕೆ ಬುಕ್‌ಮೈಶೋ ಮೂಲಕ ಉಚಿತ ನೋಂದಣಿ ವ್ಯವಸ್ಥೆ ಕಲ್ಪಿಸಿದೆ. ನೋಂದಣಿ ಆರಂಭವಾದ ಒಂದು ಗಂಟೆಯಲ್ಲೇ ಎಲ್ಲಾ ಸೀಟುಗಳು ಭರ್ತಿಯಾದ ಹಿನ್ನೆಲೆಯಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.
ಕಾರ್ಯಕ್ರಮದ ಸ್ಥಳಕ್ಕೆ ಜನರ ಆಗಮನ ಮತ್ತು ನಿರ್ಗಮನ ಸುಗಮವಾಗಿ ನಡೆಯುವಂತೆ, ಯಾವುದೇ ನೂಕುನುಗ್ಗಲು ಉಂಟಾಗದ ರೀತಿಯಲ್ಲಿ ಸಂಪೂರ್ಣ ಡಿಜಿಟಲ್ ಹಾಗೂ ತಂತ್ರಜ್ಞಾನ ಆಧಾರಿತ ಪ್ರವೇಶ ವ್ಯವಸ್ಥೆ ರೂಪಿಸಲಾಗಿದೆ. ನೋಂದಣಿ ಮಾಡಿಕೊಂಡವರಿಗೆ ಬುಕ್‌ಮೈಶೋ ಆ್ಯಪ್‌ನಲ್ಲಿ ಲೈವ್ ಕ್ಯೂಆರ್ ಕೋಡ್ ಹೊಂದಿರುವ ಡಿಜಿಟಲ್ ‘ಎಂ-ಟಿಕೆಟ್’ ನೀಡಲಾಗುತ್ತದೆ.
₹35,000 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು; WDFC ರಾಷ್ಟ್ರಕ್ಕೆ ಸಮರ್ಪಣೆ
ಪ್ರಧಾನಿ ಮೋದಿ ಅವರ ಈ ಪ್ರವಾಸದ ವೇಳೆ ₹20,700 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (WDFC)ನ 326 ಕಿಲೋಮೀಟರ್ ಉದ್ದದ ಮೂರು ಪ್ರಮುಖ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತದೆ. ಇವು ನ್ಯೂ ಸನಂದ್–ನ್ಯೂ ಮಕರಪುರ, ನ್ಯೂ ಉಂಬರ್ಗಾಂವ್–ನ್ಯೂ ಸಫಾಳೆ ಮತ್ತು ನ್ಯೂ ಸಫಾಳೆ–ನ್ಯೂ ಜೆಎನ್‌ಪಿಟಿ ವಿಭಾಗಗಳಾಗಿವೆ.
ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ (JNPA)ಗೆ ನೇರ ಸಂಪರ್ಕ ಕಲ್ಪಿಸುವುದರಿಂದ ರಫ್ತು-ಆಮದು ಸರಕು ಸಾಗಣೆ ವೇಗಗೊಳ್ಳಲಿದೆ. ಇದರಿಂದ ಸಾರಿಗೆ ವೆಚ್ಚ ಕಡಿಮೆಯಾಗುವುದರ ಜೊತೆಗೆ ಮುಂಬೈ ರೈಲ್ವೆ ಜಾಲದ ಮೇಲಿನ ಒತ್ತಡವೂ ತಗ್ಗಲಿದೆ.
ಇದರ ಜೊತೆಗೆ ನ್ಯೂ ಸನಂದ್ (ನಾರ್ತ್), ನ್ಯೂ ಮಕರಪುರ, ನ್ಯೂ ಉಂಬರ್ಗಾಂವ್ ಹಾಗೂ ಮುಂಬೈನ ನ್ಯೂ ಜೆಎನ್‌ಪಿಟಿಯಿಂದ ಸರಕು ಸಾಗಣೆ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ.
ಇದಲ್ಲದೆ ತಾಂಡಾ ರೋಡ್–ವಡೋದರ (ಪ್ರತಾಪನಗರ) ನಡುವೆ ಹೊಸ ಪ್ರಯಾಣಿಕ ರೈಲಿಗೂ ಚಾಲನೆ ನೀಡಲಿದ್ದಾರೆ. ಛೋಟಾ ಉದಯಪುರ–ಧಾರ್ ರೈಲ್ವೆ ಯೋಜನೆಯ ಭಾಗವಾಗಿ ನಿರ್ಮಿಸಲಾದ ಜೋಬತ್–ತಾಂಡಾ ರೋಡ್ ಹೊಸ ರೈಲು ಮಾರ್ಗವನ್ನೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಈ ಹೊಸ ರೈಲು ಮಾರ್ಗದ ಮೂಲಕ ಅಲಿರಾಜ್‌ಪುರ ಜಿಲ್ಲೆಯ ದೂರದ ಬುಡಕಟ್ಟು ಪ್ರದೇಶಗಳು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸಂಪರ್ಕ ಹೊಂದಲಿವೆ.

