ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕಾಳಗ ಮುಂದುವರೆದಿರುವಾಗಲೇ 11 ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ 11 ಶಾಸಕರು ವಿದೇಶ ಪ್ರವಾಸಕ್ಕೆ ಹೋಗಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ ಬಣದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಸರ್ಕಾರಿ ಪ್ರಾಯೋಜಿತ ಪ್ರವಾಸವಲ್ಲ. ಖಾಸಗಿ ಪ್ರವಾಸವಾಗಿದ್ದು, ಶಾಸಕರು ತಮ್ಮ ಖರ್ಚಿನಲ್ಲಿಯೇ ಫಾರಿನ್ ಟ್ರಿಪ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ನಾಯಕತ್ವ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಮಂಗಳವಾರ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್ಸಿಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರು:
ದೇವೇಂದ್ರಪ್ಪ, ಜಗಳೂರು ಶಾಸಕ
ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು ಶಾಸಕ
ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ
ಬಿ.ಎಂ ನಾಗರಾಜ್, ಸಿರಗುಪ್ಪ ಶಾಸಕ
ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ
ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ
ಶರಣಗೌಡ ಬಯ್ಯಾಪುರ, ಎಂಎಲ್ಸಿ
ವಸಂತ್ ಕುಮಾರ್, ಎಂಎಲ್ಸಿ
ನಾಗರಾಜ್ ಯಾದವ್, ಎಂಎಲ್ಸಿ
ಡಾ. ಡಿ. ತಿಮಯ್ಯ, ಎಂಎಲ್ಸಿ
ಮಲೇಷಿಯನ್ ಏರ್‌ಲೈನ್ಸ್‌ನ MH 193 ವಿಮಾನದಲ್ಲಿ ಶಾಸಕರು ತೆರಳಿದ್ದಾರೆ. ಆಸ್ಟ್ರೇಲಿಯಾಗೆ ನೇರ ವಿಮಾನ ಇಲ್ಲದ ಕಾರಣ ಟ್ರಾನ್ಸಿಟ್ ಫ್ಲೈಟ್ ಮೂಲಕ ತೆರಳಲು ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನಿಂದ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ತೆರಳುವ ಶಾಸಕರು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುತ್ತಾರೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಹೋಗುವ ಶಾಸಕರು ಮಾರ್ಚ್ 1ರವರೆಗೆ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ.
ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನಮ್ಮ ದುಡ್ದಲ್ಲಿ ನಾವು ವಿದೇಶ ಪ್ರವಸಕ್ಕೆ ತೆರಳುತ್ತಿದ್ದೇವೆ. ಬೆಳಗವಿ ಅಧಿವೇಶನದ ವೇಳೆಯೇ ವಿದೇಶ ಪ್ರವಾಸಕ್ಕೆ ಹೋಗೋಣ ಎಂದು ಮಾತನಾಡಿಕೊಂಡಿದ್ದೆವು. ಇಷ್ಟ ಇದ್ದವರು ಬರಬಹುದು ಎಂದೂ ಹೇಳಿದ್ದೆವು. ನಾವು ಕುಟುಂಬ ಸಮೇತವಾಗಿ ಹೋಗುತ್ತಿದ್ದೇವೆ. ನಮ್ಮ ವೈಯಕ್ತಿಕ ಹಣದಿಂದ ಟಿಕೆಟ್ ಬುಕ್ ಮಾಡಿ ಹೋಗುತ್ತಿದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದರು.
ಯಾವುದೇ ಬಣ ರಾಜಕೀಯವೂ ಇಲ್ಲ, ಫಾರಿನ್ ಟ್ರಿಪ್ ನಲ್ಲಿ ವಿಶೇಷತೆಯೂ ಇಲ್ಲ. ಅಧಿಕಾರ ಹಂಚಿಕೆ ವಿಚಾರಕ್ಕೂ ವಿದೇಶ ಪ್ರವಾಸಕ್ಕೂ ಯಾವುದೇ ಸಂಬಂಧವಿಲ್ಲ. ಇದು ನಮ್ಮ ವೈಯಕ್ತಿಕ ಪ್ರವಾಸ ಕುಟುಂಬದ ಜೊತೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

