ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಯ ಮಕ್ಕಳಿಗೆ ಜವಾಬ್ದಾರಿಯುತವಾಗಿ ಅಕ್ಷರ ಕಲಿಸಬೇಕಾದ ಶಿಕ್ಷಕರೇ ಬೇಜವಾಬ್ದಾರಿ ಮೆರೆದಿದ್ದು, 7ನೇ ತರಗತಿಯ ಮಕ್ಕಳಿಗೆ ವರ್ಣಮಾಲೆಯೂ ಗೊತ್ತಿಲ್ಲದ ಸ್ಥಿತಿ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರ ಸಂಚಾರದ ವೇಳೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದ ವೇಳೆ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಅ, ಆ, ಇ,ಈ ಕೂಡ ಬಾರದಿರುವುದನ್ನು ಕಂಡು ಶಾಕ್ ಆಗಿದ್ದಾರೆ.
ಈ ರೀತಿಯ ಪಾಠ ಕಲಿಸಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಶಾಸಕರು ಸೂಚನೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಜೊತೆಗಿನ ಸಂವಾದ ನಡೆಸಿದಾಗ ಮಕ್ಕಳಿಗೆ ಕನಿಷ್ಠ ಅ, ಆ, ಇ, ಈ ಅಕ್ಷರಗಳೇ ಬರುವುದಿಲ್ಲ ಎಂಬುವುದು ಗೊತ್ತಾಗಿದೆ.
ಈ ವೇಳೆ ಈ ಮಕ್ಕಳಿಗೆ 1 ರಿಂದ 6 ನೇ ತರಗತಿಯವರೆಗೆ ಶಿಕ್ಷಣ ಕಲಿಸಿದ ಶಿಕ್ಷಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡದೇ ಇದ್ದ ಶಿಕ್ಷಕರಿಗೆ ನೋಟಿಸ್ ನೀಡಿ ಅವರನ್ನು ಅಮಾನತು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಖಡಕ್ ಸೂಚನೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ 180 ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ.
ಶಾಸಕರಾದ ಪ್ರದೀಸ್ ಈಶ್ವರ್ ಅವರು ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದಾಗ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆಯ ಗುಣಮಟ್ಟ ಕಡಿಮೆಯಾಗಿ ಶೈಕ್ಷಣಿಕವಾಗಿ ಹಿಂದುಳಿರುವುದು ಕಂಡು ಬಂದಿರುತ್ತದೆ.
ಹೀಗಾಗಿ 2026-27 ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿನ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಗತಿ ಮತ್ತು ಕಲಿಕೆಯನ್ನು ಪರಿಶೀಲನೆ ಮಾಡಲಾಗಿದೆ. ಕಲಿಕೆಯಲ್ಲಿನ ಗುಣಮಟ್ಟಕ್ಕಿಂತ ಹಿಂದುಳಿದ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ 7 ನೇ ತರಗತಿವರೆಗೆ ಬೋಧನಾ ಕಾರ್ಯಗಳನ್ನು ನಿರ್ವಹಿಸಿರುವ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಅಲ್ಲದೆ, ನೋಟಿಸ್‌ಗೆ ಸಮಜಾಯಿಷಿಯನ್ನು ಪಡೆದು, ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಶಾಸಕರ ಪತ್ರದಂತೆ ಈ ಕಛೇರಿಯಿಂದ ಆಯು ಕ್ಷೇತ್ರ ಸಿಬ್ಬಂದಿಗಳಾದ ಶಿಕ್ಷಣ ಸಂಯೋಜಕರು, ಬಿ.ಆರ್.ಪಿ. ಸಿ.ಆರ್.ಪಿ ರವರನ್ನು ನಿಯೋಜಿಸಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿನ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಿ ಕಲಿಕೆಯಲ್ಲಿ ಅತೀ ಹಿಂದುಳಿದಿರುವ ವಿದ್ಯಾರ್ಥಿಗಳ ಪಟ್ಟಿ ಮತ್ತು ಆಯಾ ವಿದ್ಯಾರ್ಥಿಗಳಿಗೆ ಬೋಧನಾ ಕಾರ್ಯಗಳನ್ನು ನಿರ್ವಹಿಸುತ್ತಿರುವ ಶಿಕ್ಷಕರ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಅನೇಕ ಯೋಜನೆಗಳನ್ನು ಇಲಾಖೆಯಿಂದ ಜಾರಿ ಮಾಡಿದ್ದರೂ, ಆಯಾ ಶಾಲಾ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ನಿಗಧಿತ ಸಮಯದಲ್ಲಿ ಅವಶ್ಯಕ ವಿದ್ಯಾಭ್ಯಾಸದ ಕೊರತೆಯಿಂದ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳಲು ಆಗದೇ ಸಮಾಜದಲ್ಲಿ ಹಿಂದುಳಿಯಲು ಕಾರಣರಾಗುತ್ತಾರೆ. ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮಗಳು ನಿಷ್ಟಯೋಜಕವಾಗುವಂತೆ, ಹಾಗೂ ಕಾರ್ಯಕ್ರಮ/ಯೋಜನೆಗಳಿಗೆ ನಿರ್ವಹಿಸುತ್ತಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಪರೋಕ್ಷವಾಗಿ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟಾಗಿದೆ. ಈ ಕಾರಣದಾಗಿ ತಮ್ಮ ಈ ಬೇಜವಾಬ್ದಾರಿಯಿಂದಾಗಿ ಮೇಲಾಧಿಕಾರಿಗಳು, ಇಲಾಖಾ ಮುಖ್ಯಸ್ಥರು ಸರ್ಕಾರದ ಮಟ್ಟದಲ್ಲಿ ಮುಜುಗರಕ್ಕೆ ಒಳಪಡುವಂತೆ ಮಾಡಲಾಗಿದೆ. ತಮಗೆ ನೀಡಿರುವ ಕರ್ತವ್ಯದ ಜವಾಬ್ದಾರಿಗಳನ್ನು ನಿರ್ವಹಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಕರ್ನಾಟಕ ಕಡ್ಡಾಯ ಶಿಕ್ಷಣ ಕಾಯಿದೆ ಉಲ್ಲಂಘನೆ ಮತ್ತು ತಮಗೆ ನೀಡಿರುವ ಜವಾಬ್ದಾರಿಗಳನ್ನು ಪರಿಪೂರ್ಣವಾಗಿ ನಿರ್ವಹಿಸಲು ವಿಫಲರಾಗಿರುವುದರಿಂದ ಕರ್ನಾಟಕ ನಾಗರೀಕ ಸೇವಾ ನಿಯುಗಳನ್ವಯ ನಿಮ್ಮ ಮೇಲೇ ಏಕೆ ಶಿಸ್ತು ಕ್ರಮ ಜರುಗಿಸಬಾರದು? ಎಂದು ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ನೋಟಿಸ್ ತಲುಪಿದ 3 ದಿನಗಳ ಒಳಗಾಗಿ ಶಿಕ್ಷಣಾಧಿಕಾರಿಗಳ ಕಛೇರಿಗೆ ಸೂಕ್ತ ದಾಖಲೆಗಳೊಂದಿಗೆ ಲಿಖಿತ ಸಮಜಾಷಿಯಿ ನೀಡುವಂತೆ ಸೂಚಿಸಲಾಗಿದೆ . ತಪ್ಪಿದಲ್ಲಿ ತಾವು ಹೇಳುವುದು ಏನೂ ಇಲ್ಲವೆಂದು ಭಾವಿಸಿ ಏಕ ಪಕ್ಷೀಯವಾಗಿ ಸಂಬಂಧಿಸಿದ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂಬುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.

