ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ಚಾಲನೆ ನೀಡಿದರು.
ಕಾಟಕೇರಿ ಬಳಿಯ ಕಾಸ್ಪಾಡಿ ರಸ್ತೆ, ಭಗವತಿ ದೇವಸ್ಥಾನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ, ಅಪ್ಪೇಂದ್ರೀಯಪ್ಪ ದೇವಸ್ಥಾನ ರಸ್ತೆ ಉದ್ಘಾಟನೆ, ಕಾಟಕೇರಿ ಗೋಳಿಕಟ್ಟೆ ಮುಖ್ಯ ರಸ್ತೆ, ಮದೆನಾಡು ಬೈರೆಟ್ಟಿರ ಜಂಕ್ಷನ್ ರಸ್ತೆ ಮತ್ತು ಮದೆನಾಡು ಮಠದ ಮನೆ ರಸ್ತೆಯನ್ನು ಉದ್ಘಾಟಿಸಿದರು.
ಬಳಿಕ ಗೋಳಿಕಟ್ಟೆ ಸರ್ಕಾರಿ ಶಾಲೆ ಪರಿಶೀಲಿಸಿದರು, ಕೋಲ್ಪೆ ದೈವಸ್ಥಾನ ರಸ್ತೆ ಉದ್ಘಾಟಿಸಿದರು. ಹಾಗೆಯೇ ದೇಶ್‍ಕೋಡಿ, ಸಾಲಾಪು ರಸ್ತೆ ಭೂಮಿ ಪೂಜೆ ನೆರವೇರಿಸಿದರು. ನಂತರ ಕೋಲ್ಚಾರು ರಸ್ತೆ ಉದ್ಘಾಟನೆ, ಕೆಮ್ಮಾರನ ಶಿರಾಜ್ ರಸ್ತೆ ಉದ್ಘಾಟಿಸಿದರು. ಬಳಿಕ ನೆರಿಯನ ಐನ್‍ಮನೆಗೆ ಭೇಟಿ ನೀಡಿದರು, ಹಾಗೆಯೇ ಈಶ್ವರಪ್ಪ ಮಾದೂರಪ್ಪ ರಸ್ತೆ ಉದ್ಘಾಟಿಸಿದರು.
ಜೋಡುಪಾಲ ಕಿರಿಕಿಲ್ ರಸ್ತೆ ಭೂಮಿಪೂಜೆ, ಅಬ್ಬಿಕೊಲ್ಲಿ ರಸ್ತೆ ಉದ್ಘಾಟಿಸಿದರು. ಕುಡಿಯರ ಕಾಲೋನಿಯಲ್ಲಿ ಕುಂದುಕೊರತೆ ಸಭೆ ನಡೆಸಿದರು. ಕಾಟಕೇರಿ ಕೂರನ ಬಾಣೆ ರಸ್ತೆ ಉದ್ಘಾಟಿಸಿದರು. ತಾಳತ್ತಮನೆ, ಮಂಗಳೂರು-ಭಾಗಮಂಡಲ ಲಿಂಕ್ ರಸ್ತೆ ಉದ್ಘಾಟಿಸಿದರು. ತಾಳತ್ತಮನೆ ದುರ್ಗಾ ಭಗವತಿ ದೇವಸ್ಥಾನ ರಸ್ತೆ ಭೂಮಿ ಪೂಜೆ ನೆರವೇರಿಸಿದರು.
ಎ.ಎಸ್.ಪೊನ್ನಣ್ಣ ಮಾತನಾಡಿ, “ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದೆ” ಎಂದು ತಿಳಿಸಿದರು.
“ಕಳೆದ ಎರಡೂವರೆ ವರ್ಷದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಸುಮಾರು 2,500 ಕಿಮೀ. ರಸ್ತೆ ಅಭಿವೃದ್ಧಿಗೆ ಮುಂದಾಗಲಾಗಿದೆ” ಎಂದರು.
“ಮುಖ್ಯಮಂತ್ರಿಯವರ ರಸ್ತೆ ಅಭಿವೃದ್ಧಿ ಯೋಜನೆಯಡಿ 50 ಕೋಟಿ ರೂ., ಜತೆಗೆ ಹೆಚ್ಚುವರಿಯಾಗಿ 30 ಕೋಟಿ ರೂ. ಹೀಗೆ ರಸ್ತೆ, ಸೇತುವೆ, ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಅನುದಾನ ಒದಗಿಸಿದೆ” ಎಂದು ಶಾಸಕರು ತಿಳಿಸಿದರು.
“ಕೊಡಗು ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಸಾರಿಗೆ ಸಂಪರ್ಕಕ್ಕೆ ಸಾಕಷ್ಟು ಬೇಡಿಕೆಗಳಿದ್ದು, ಹಂತ ಹಂತವಾಗಿ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕೊಡಗು ಜಿಲ್ಲೆಗೆ ಇನ್ನೂ ಅನುದಾನ ಬರಬೇಕಿದೆ. ಕುಡಿಯುವ ನೀರಿನ ಯೋಜನೆಗಾಗಿ 58 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ” ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.
ಜಮ್ಮಾ ಬಾಣೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕರು, “ಪಟ್ಟೆದಾರರ ಭೂಮಿ ಸಂಬಂಧ ಸಮಸ್ಯೆ ಪರಿಹರಿಸಲು ಶ್ರಮಿಸಲಾಗಿದೆ. ಹಿಂದಿನ ಶಾಸಕದ್ವಯರು ಸಹ ಜಮ್ಮಬಾಣೆ ಭೂಮಿ ಸಮಸ್ಯೆ ಪರಿಹರಿಸಲು ತಮ್ಮದೇ ಆದ ಪ್ರಯತ್ನ ಮಾಡಿದ್ದಾರೆ” ಎಂದರು.
ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿ, “ಕಳೆದ ಬಾರಿ ಬಜೆಟಿನಲ್ಲಿ ವಿರಾಜಪೇಟೆ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಲಾಗಿದೆ. ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯನ್ನು 50 ಹಾಸಿಗೆ ಆಸ್ಪತ್ರೆಯನ್ನಾಗಿ ಮತ್ತು ಹುದಿಕೇರಿ ಆಸ್ಪತ್ರೆಯನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಲ್ಲಿ ಪ್ರಕಟಿಸಲಾಗಿತ್ತು, ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸ್ಥಳ ಪರಿಶೀಲಿಸಲಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುತ್ತದೆ” ಎಂದು ಹೇಳಿದರು.
“ಕಾವೇರಿ ನದಿ ಪಾತ್ರದಲ್ಲಿನ ತಗ್ಗು ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಸ್ವಚ್ಚತೆಗೆ ಸುಮಾರು 50 ಕೋಟಿ ರೂ ವಿನಿಯೋಗಿಸಲಾಗುತ್ತಿದೆ. ಹಾಗೆಯೇ ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ವಾಸಿಸುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ ವಸತಿ ಕಲ್ಪಿಸಲು 20 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ” ಎಂದು ಶಾಸಕರು ಮಾಹಿತಿ ನೀಡಿದರು.

