ಮಹಾಶಿವರಾತ್ರಿ 2026ರ ಅಂಗವಾಗಿ ಬೆಂಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಆದ್ದರಿಂದ ಅಂದು ಸಂಚಾರ ಮಾರ್ಗದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿ ಸಂಚಾರಿ ಪೊಲೀಸರು ಆದೇಶವನ್ನು ಹೊರಡಿಸಿದ್ದಾರೆ.
ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವೋಹಂ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
ದಿನಾಂಕ 15-02-2026ರಂದು ಭಾನುವಾರ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಂಭವ ಇರುವುದರಿಂದ ಈ ರಸ್ತೆಯ ಬದಲಾಗಿ ಪರ್ಯಾಯ ರಸ್ತೆಗಳಾದ ಸುರಂಜನ್ ದಾಸ್ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ಜೆ.ಬಿ.ನಗರ ಮುಖ್ಯ ರಸ್ತೆಗಳನ್ನು ಬಳಕೆ ಮಾಡಲು ಕೋರಿದ್ದಾರೆ.
ನಿಲುಗಡೆ ನಿಷೇಧಿತ ಸ್ಥಳಗಳು: ಹಳೆ ವಿಮಾನ ನಿಲ್ದಾಣ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ದೇವಸ್ಥಾನಕ್ಕೆ ವಾಹನಗಳಲ್ಲಿ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸರ್.ಎಂ ವಿಶ್ವೇಶ್ವರಯ್ಯ ಕಾಲೇಜು ಮೈದಾನ, ಹಳೇ ವಿಮಾನ ನಿಲ್ದಾಣ ರಸ್ತೆ ಇಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಸಾರ್ವಜನಿಕರು ಬೆಂಗಳೂರು ನಗರ ಸಂಚಾರಿ ಪೊಲೀಸರ ಜೊತೆ ಸಹಕರಿಸಬೇಕು ಎಂದು ಕೋರಲಾಗಿದೆ.

