ಬೆಂಗಳೂರು: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವ ಕುಂಬಳಗೋಡು ಸಮೀಪದ ರಾಮೋಹಳ್ಳಿ ಕೆರೆಯಲ್ಲಿದ್ದ ಸೂಟ್ಕೇಸ್‌ನಲ್ಲಿ ಪತ್ತೆಯಾಗಿದೆ.
ಚಿನ್ನಾಭರಣ ದೋಚುವ ಉದ್ದೇಶದಿಂದ ದುಷ್ಕರ್ಮಿಗಳು ವೃದ್ಧೆ ಕೊಲೆ ಮಾಡಿ ಸೂಟ್ಕೇಸ್ ನಲ್ಲಿ ಶವ ಇಟ್ಟು ಅದನ್ನು ಕೆರೆಗೆ ಎಸೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕುಂಬಳಗೋಡು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚೆಲ್ಲಘಟ್ಟ ನಿವಾಸಿ ಜಯಮ್ಮ(61) ಕೊಲೆಯಾದ ವೃದ್ಧೆ ಎಂದು ಗುರುತಿಸಲಾಗಿದೆ. ಜುಲೈ 15ರಂದು ಸಂಜೆ 4 ಗಂಟೆ ವೇಳೆಗೆ ಮನೆಯಿಂದ ಹೊರಗೆ ಹೋಗಿದ್ದ ಜಯಮ್ಮ ನಾಪತ್ತೆಯಾಗಿದ್ದರು. ಈ ಕುರಿತಾಗಿ ಅವರ ಪುತ್ರ ಜಯಕುಮಾರ್ ಕುಂಬಳಗೋಡು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆಟೋ ಚಾಲಕರಾಗಿರುವ ಜಯಕುಮಾರ್ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿ ಜೊತೆ ಚಲ್ಲಘಟ್ಟ ಬಿಎಂಟಿಸಿ ಬಸ್ ಡಿಪೋ ಬಳಿ ಮನೆಯಲ್ಲಿ ವಾಸವಾಗಿದ್ದಾರೆ. ಜುಲೈ 15ರಂದು ಸಂಜೆ ಮನೆಯಿಂದ ಹೊರಗೆ ಹೋಗಿದ್ದ ಜಯಮ್ಮ ವಾಪಸ್ ಬಂದಿರಲಿಲ್ಲ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ನಂತರ ಪರಿಚಯದವರು, ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಜಯಮ್ಮ ಪತ್ತೆಯಾಗಿರಲಿಲ್ಲ. ಹೀಗಾಗಿ ಜುಲೈ 16ರಂದು ದೂರು ನೀಡಿದ್ದರು.
ರಾಮೋಹಳ್ಳಿ ಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಸೂಟ್ ಕೇಸ್ ನಲ್ಲಿ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹ ಜಯಮ್ಮ ಅವರದು ಎನ್ನುವುದು ಗೊತ್ತಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

