ಸರ್ಕಾರಿ ಸಹಾಯಧನ, ಪರಿಹಾರ ಧನ ಸಾಲದ ಖಾತೆಗೆ ಹೊಂದಾಣಿಕೆ ಮಾಡಿದರೆ ಬ್ಯಾಂಕ್ ಮೇಲೆ ಕ್ರಮ: ಸಚಿವ ಸಂತೋಷ್ ಲಾಡ್ ಎಚ್ಚರಿಕೆ

ಧಾರವಾಡ: ರೈತರು ಸೇರಿದಂತೆ ಅನೇಕ ಕುಶಲಕರ್ಮಿಗಳು, ಉದ್ಯೋಗಿಗಳು ಬ್ಯಾಂಕ್‍ ಗಳಿಂದ ಸಾಲ ಸೌಲಭ್ಯ ಪಡೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ಅನಿವಾರ್ಯ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಸಾಧ್ಯವಾಗದೆ ಸುಸ್ಥಿದಾರ ಆಗುತ್ತಾರೆ. ಬ್ಯಾಂಕ್‍ ಗಳು ರೈತರಿಂದ ಅಥವಾ ಸುಸ್ತಿದಾರರಿಂದ ಸಾಲ ವಸೂಲಾತಿಯಲ್ಲಿ ನೈಜ ಕಾರಣ ಪರಿಗಣಿಸಿ, ಮಾನವೀಯತೆ ತೋರಬೇಕು. ಮರುಪಾವತಿಗೆ ಕಾಲಾವಕಾಶ ನೀಡಬೇಕು. ಸಾಲ ವಸೂಲಿಗಿಂತ ಜನರ ಜೀವ ಮುಖ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

 ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ಬ್ಯಾಂಕರ್ಸ್ ಗಳೊಂದಿಗೆ ರೈತ ಆತ್ಮಹತ್ಯೆ ಪ್ರಕರಣಗಳು ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಭೆ ನಡೆಸಿದರು.

ಸಾಲ ವಸೂಲಾತಿಯಲ್ಲಿ ಮಾನವೀಯತೆ ಮೀರಿ ಯಾರೂ ವರ್ತಿಸಬಾರದು. ಜನರ ಜೀವ ಮುಖ್ಯ. ರೈತ ಆತ್ಮಹತ್ಯೆಗಳು ಯಾವ ಕಾರಣಕ್ಕಾಗಿ ಮತ್ತು ಯಾವ ಸಂದರ್ಭಗಳಿಂದ ಘಟಿಸುತ್ತಿವೆ ಎಂಬುವುದರ ಕುರಿತು ಅಧ್ಯಯನ ಮಾಡಲು ಕೃಷಿ ವಿಶ್ವವಿದ್ಯಾಲಯ, ಕಂದಾಯ, ಕೃಷಿ ಇಲಾಖೆ, ಬ್ಯಾಂಕ್ ಅಧಿಕಾರಿ ಹಾಗೂ ಸಾಮಾಜಿಕ ತಜ್ಞರ ಒಳಗೊಂಡ ಸಮಿತಿಯನ್ನು ರಚಿಸಲು ಕ್ರಮವಹಿಸಲಾಗುತ್ತದೆ. ಕೃಷಿ ತಜ್ಞರನ್ನು ಸಹ ಭಾಗಿ ಮಾಡಿಕೊಂಡು ವೈಜ್ಞಾನಿಕವಾಗಿ ಅಧ್ಯಯನವನ್ನು ಮಾಡಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ರೈತರ ಮನೆಗಳಿಗೆ ಹೋಗಿ ಸಾಲ ಮರುಪಾವತಿಗಾಗಿ ತಿಳಿವಳಿಕೆ ನೀಡಬೇಕು. ಅವರ ಆರ್ಥಿಕ ಸ್ಥಿತಿ, ಉದ್ಯೋಗ ಬಗ್ಗೆ ತಿಳಿದು ಕಾಲಾವಕಾಶ ನೀಡಬೇಕೆಂದು ಹೇಳಿದ್ದಾರೆ.

ಸರ್ಕಾರದಿಂದ ಸಿಗುವ ಪಿಂಚಣಿ, ಪರಿಹಾರ, ಸಹಾಯಧನ ಮುಟ್ಟುವಂತಿಲ್ಲ: ರಾಷ್ಟ್ರೀಕೃತ ಬ್ಯಾಂಕ್, ಯಾವುದೇ ಬ್ಯಾಂಕ್ ಇದ್ದರೂ ಸಹ ಎನ್.ಪಿ. ಆಗಿರುವ ಅಕೌಂಟ್‍ಗಳಿಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಸಹಾಯಧನ, ಪಿಂಚಣಿ, ಬೆಳೆ ಪರಿಹಾರ, ವಿಮೆ ಪರಿಹಾರ, ಇತರ ಸಾಲ ಸೌಲಭ್ಯಗಳಿಂದ ಯಾವುದೇ ರೀತಿ ಹಣ ಅವರ ಉಳಿತಾಯ ಖಾತೆಗೆ ಬಂದರೂ ಯಾವುದೇ ಕಾರಣಕ್ಕೂ ಬ್ಯಾಂಕ್‍ದವರು ಅದನ್ನು ಸಾಲಕ್ಕೆ ಮರು ಹೊಂದಾಣಿಕೆ ಅಥವಾ ಸಾಲದ ಖಾತೆಗೆ ಜಮೆ ಪಡೆಯುವ ಅವಕಾಶವಿಲ್ಲ. ಮತ್ತು ಈ ರೀತಿ ಕ್ರಮ ವಹಿಸಲು ಬ್ಯಾಂಕ್‍ನವರಿಗೆ ಯಾವುದೇ ರೀತಿ ಕಾನೂನಿನಲ್ಲಿ ಅವಕಾಶವಿಲ್ಲ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿ ಅವರ ಜೊತೆ ಚರ್ಚೆಯನ್ನು ಸಹ ಮಾಡುತ್ತೇನೆ. ಕ್ರಾಪ್ ಲೋನ್ ಆಗಿರಲಿ, ಬೇರೆ ಯಾವುದೇ ರೀತಿಯ ಲೋನ್ ತೆಗೆದುಕೊಂಡರೂ ಸರ್ಕಾರದ ಸಬ್ಸಿಡಿಗೆ ಅದನ್ನು ಅಟ್ಯಾಚ್ ಮಾಡಬಾರದು ಎಂದು ಸಚಿವ ಸಂತೋಷ ಲಾಡ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಕುಂದಗೋಳ ಶಾಸಕ ಎಂ. ಆರ್. ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿದರು.

ವೇದಿಕೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಎಂ. ಬ್ಯಾಕೋಡ್ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ ಇದ್ದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ಸಿ.ಭದ್ರಣ್ಣವರ, ಲೀಡ್ ಬ್ಯಾಂಕ್ ಮ್ಯಾನೇಜರ್ ಬಸವರಾಜ ಗಡಾದ, ಎಲ್ಲ ತಾಲೂಕುಗಳ ತಹಶೀಲ್ದಾರರು, ಅಧಿಕಾರಿಗಳು ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read