ಮಂಡ್ಯ: ಕಲ್ಲು ಗಣಿಗಾರಿಕೆ ನಡೆಸಿ ಪ್ರಪಾತದಂತೆ ಅಗೆದಿದ್ದ ಹೊಂಡಕ್ಕೆ ಟಿಪ್ಪರ್ ಲಾರಿ ಬಿದ್ದು ಚಾಲಕ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜಟಕ ಗೇಟ್ ಬಳಿ ಕ್ವಾರೆಯಲ್ಲಿ ಈ ದುರಂತ ಸಂಭವಿಸಿದೆ. ರವಿ ಹಾಗೂ ಕಾಂತ ಎಂಬುವವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಗಣಿಗಾರಿಕೆ ನಡೆಸಿದ್ದ ಸ್ಥಳವನ್ನು ಪ್ರಪಾತದಂತೆ ಅಗೆದಿಡಲಾಗಿತ್ತು. ಅದೇ ಭಾಗದಲ್ಲಿ ಟಿಪ್ಪರ್ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಪ್ರಪಾತದಲ್ಲಿ ನೀರು ತುಂಬಿದ್ದರಿಂದ ಟಿಪ್ಪರ್ ಸಮೇತ ಚಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಲಕ್ಷ್ಮಣ ಮೃತ ಚಾಲಕ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಟಿಪ್ಪರ್ ಚಾಲಕನ ಮೃತದೇಹ ಹೊರತೆಗೆದಿದ್ದಾರೆ.

