ಮಂಡ್ಯ: ಜಿಲ್ಲಾಅ ನ್ಯಾಯಾಧೀಶರು ಮಂಡ್ಯದ ಮಿಮ್ಸ್ ಆಸ್ಪತ್ರೆ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಭೂದಾಖಲೆಗಳ ಪ್ರಕರಣ ಸಂಬಂಧ ಜೈಲಿನಲ್ಲಿರಬೇಕಾಗಿದ್ದ ಆರೋಪಿ ಆಸ್ಪತ್ತ್ರೆಯಲ್ಲಿ ಯುವತಿಯೊಬ್ಬಳ ಜೊತೆ ಇರುವುದನ್ನು ಕಂಡು ನ್ಯಾಯಾಧೀಶರೇ ಶಾಕ್ ಆದ ಘಟನೆ ನಡೆದಿದೆ.
ಜೈಲಿನಲ್ಲಿ ಇರಬೇಕಾಗಿದ್ದ ಭೂ ದಾಖಲೆಗಳ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಅನಧಿಕೃತವಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿರುವುದು ಜಿಲ್ಲಾ ನ್ಯಾಯಾಧೀಶರ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ರೋಗ ಇಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ಹಾಗೂ ಆತನೊಂದಿಗೆ ಯುವತಿಯೊಬ್ಬಳು ವಿಶೇಷ ಕೊಠಡಿಯಲ್ಲಿ ಇರುವುದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಂಡ್ಯ ಜಿಲ್ಲಾ ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ್ ನೇತೃತ್ವದಲ್ಲಿ ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಜೈಲಿನಲ್ಲಿ ಇರಬೇಕಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮೊಹಮ್ಮದ್ ಹುಸೇನ್ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ಪದೆಯುತ್ತಿರುವುದು ಕಂಡುಬಂದಿದೆ.
ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿಯಲ್ಲಿ ಎಡಿಎಲ್‌ಆರ್ ಆಗಿ ಕಾರ್ಯನಿರ್ವಹಿಸಿದ್ದ ಮೊಹಮ್ಮದ್ ಹುಸೇನ್ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿಯನ್ನು ಬೇರೆಯವರಿಗೆ ಮಾಡಿಕೊಟ್ಟ ಆರೋಪವಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಬಳಿಕ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಜೈಲಿನಲ್ಲಿ ಇರಬೇಕಿದ್ದ ಆತ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಇರುವುದನ್ನು ನ್ಯಾಯಾಧೀಶರ ತಪಾಸಣೆ ವೇಳೆ ಗಮನಿಸಲಾಗಿದೆ. ಈ ವೇಳೆ ಆರೋಪಿಗೆ ಏನಾಗಿದೆ ಎಂದು ವೈದ್ಯಾಧಿಕಾರಿಯನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಷ್ಟು ಗಂಭೀರ ಕಾಯಿಲೆ ಆತನಿಗಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ಅನಾರೋಗ್ಯ ಇಲ್ಲದಿದ್ದರೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದೇಕೆ ಎಂದು ಜೈಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಪರಿಶೀಲನೆ ವೇಳೆ ಆರೋಪಿ ಮೊಹಮ್ಮದ್ ಹುಸೇನ್ ಜೊತೆ ಯುವತಿಯೊಬ್ಬರು ಕೊಠಡಿಯಲ್ಲಿ ಇರುವುದು ಕೂಡ ಪತ್ತೆಯಾಗಿದೆ. ಆಕೆಯ ಬಗ್ಗೆ ವಿಚಾರಿಸಿದಾಗ, ತಾನು ಆರೋಪಿಯ ಗೆಳತಿ ಎಂದು ಯುವತಿ ತಿಳಿಸಿದ್ದಾಳೆ ಎನ್ನಲಾಗಿದೆ. ಆರೋಪಿಗೆ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು, ಜೊತೆಗೆ ಯುವತಿ ಆತನೊಂದಿಗೆ ಇರುವುದನ್ನು ಗಮನಿಸಿದ ನ್ಯಾಯಾಧೀಶರು ಜೈಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೊಹಮ್ಮದ್ ಹುಸೇನ್ನನ್ನು ಜೈಲಿನ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲಾಧಿಕಾರಿಗಳು ನ್ಯಾಯಾಧೀಶರಿಗೆ ತಿಳಿಸಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೀರಾ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಇಲ್ಲ, ಇನ್ನು ಮುಂದೆ ನ್ಯಾಯಾಲಯದ ಗಮನಕ್ಕೆ ತರುತ್ತೇವೆ ಎಂದು ಜೈಲಾಧಿಕಾರಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಪ್ರಕರಣದ ಕುರಿತು ತಕ್ಷಣ ವರದಿ ಸಲ್ಲಿಸುವಂತೆ ಜೈಲಾಧಿಕಾರಿ ಹಾಗೂ ಮಿಮ್ಸ್ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಅಗತ್ಯವಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.

