HomeIndia‘ಡಾಲರ್ ಗಳಿಕೆಗಿಂತ ಸ್ವಾತಂತ್ರ್ಯವೇ ಮುಖ್ಯ’ ; ಅಮೆರಿಕ ಬಿಟ್ಟ 3 ವರ್ಷಗಳ ಬಳಿಕ ಅಸಲಿ ಸತ್ಯ...

‘ಡಾಲರ್ ಗಳಿಕೆಗಿಂತ ಸ್ವಾತಂತ್ರ್ಯವೇ ಮುಖ್ಯ’ ; ಅಮೆರಿಕ ಬಿಟ್ಟ 3 ವರ್ಷಗಳ ಬಳಿಕ ಅಸಲಿ ಸತ್ಯ ಬಿಚ್ಚಿಟ್ಟ ಮೈಕ್ರೋಸಾಫ್ಟ್ ಮಾಜಿ ಉದ್ಯೋಗಿ !

ಅಮೆರಿಕದಂತಹ ಮುಂದುವರಿದ ದೇಶದಲ್ಲಿ, ಅದರಲ್ಲೂ ಮೈಕ್ರೋಸಾಫ್ಟ್‌ನಂತಹ ಜಾಗತಿಕ ದೈತ್ಯ ಟೆಕ್ ಕಂಪನಿಯಲ್ಲಿ ಕೈತುಂಬಾ ಸಂಬಳ ಬರುವ ಕೆಲಸ ಸಿಗುವುದು ಲಕ್ಷಾಂತರ ಭಾರತೀಯರ ಜೀವಮಾನದ ಕನಸು. ಆದರೆ, ಆ ಎಲ್ಲಾ ಸವಲತ್ತು, ಡಾಲರ್ ಪ್ಯಾಕೇಜ್ ಮತ್ತು ಐಷಾರಾಮಿ ಜೀವನವನ್ನು ನಗುನಗುತ್ತಲೇ ತೊರೆದು ಮೂರು ವರ್ಷಗಳ ಹಿಂದೆಯೇ ತಾಯ್ನಾಡಿಗೆ ಮರಳಿದ ಭಾರತೀಯ ಟೆಕ್ಕಿಯೊಬ್ಬರು ಹಂಚಿಕೊಂಡಿರುವ ಅನುಭವ ಇದೀಗ ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಯಾಗಿದ್ದ ಉಜ್ವಲ್ ಚಡ್ಡಾ ಎಂಬುವವರು ಅಮೆರಿಕವನ್ನು ತೊರೆದು ಭಾರತಕ್ಕೆ ಮರಳಿ ಮೂರು ವರ್ಷಗಳನ್ನು ಪೂರೈಸಿದ್ದಾರೆ. “ನಾನು ಅಮೆರಿಕದಲ್ಲೇ ಉಳಿದಿದ್ದರೆ ಗಳಿಸುತ್ತಿದ್ದ ಸಂಬಳಕ್ಕಿಂತ ಈಗ ಕಡಿಮೆ ಗಳಿಸುತ್ತಿರಬಹುದು, ಆದರೆ ನನ್ನ ಸ್ಯಾಲರಿ ಸ್ಲಿಪ್‌ನಲ್ಲಿ ಕಾಣಿಸದ ಎಷ್ಟೋ ಅಮೂಲ್ಯ ವಿಷಯಗಳನ್ನು ನಾನು ಇಲ್ಲಿ ಮರಳಿ ಪಡೆದುಕೊಂಡಿದ್ದೇನೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ವೀಸಾ, ಗ್ರೀನ್ ಕಾರ್ಡ್ ಆತಂಕದಿಂದ ಮುಕ್ತಿ:

ಅಮೆರಿಕ ತೊರೆದು ಭಾರತಕ್ಕೆ ಮರಳಿದ್ದರಿಂದ ಸಿಕ್ಕ ಅತಿ ದೊಡ್ಡ ನೆಮ್ಮದಿಯೆಂದರೆ, ಇಮಿಗ್ರೇಷನ್ ನಿಯಮಗಳ ಸುತ್ತ ತನ್ನ ಜೀವನವನ್ನು ಕಟ್ಟುಪಾಡುಗಳಿಗೆ ಒಳಪಡಿಸಬೇಕಾದ ಅನಿವಾರ್ಯತೆ ತಪ್ಪಿದ್ದು ಎಂದು ಉಜ್ವಲ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಒಂದು ವೇಳೆ ನಾನು ಅಮೆರಿಕದಲ್ಲೇ ಉಳಿದುಕೊಂಡಿದ್ದರೆ ಇಂದಿಗೂ ವೀಸಾ, ಗ್ರೀನ್ ಕಾರ್ಡ್ ಕ್ಯೂನಲ್ಲಿ ನಿಂತು, ‘ಒಮ್ಮೆ ಪರಿಸ್ಥಿತಿ ಸ್ಥಿರವಾಗಲಿ ನೋಡೋಣ’ ಎಂದು ಕಾಯುತ್ತಲೇ ಕಾಲ ಕಳೆಯಬೇಕಿತ್ತು. ಭಾರತಕ್ಕೆ ಬಂದ ಮೇಲೆ ನನ್ನ ವೃತ್ತಿಜೀವನದ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯವಾಯಿತು. ಹೊಸದಾಗಿ ಏನಾದರೂ ಆರಂಭಿಸಿದರೆ ವೀಸಾ ಸ್ಟೇಟಸ್‌ಗೆ ಧಕ್ಕೆ ಬರುತ್ತದೆಯೇ ಎಂಬ ಭಯವಿಲ್ಲದೆ ಸ್ವಂತ ಐಡಿಯಾಗಳ ಮೇಲೆ ಕೆಲಸ ಮಾಡಲು ಸಾಧ್ಯವಾಗಿದೆ. ಈ ಸ್ವಾತಂತ್ರ್ಯವನ್ನು ಕೇವಲ ಕಾಂಪನ್ಸೇಷನ್ ಅಥವಾ ಸಂಬಳದ ಅಂಕಿಗಳಲ್ಲಿ ಅಳೆಯಲು ಸಾಧ್ಯವಿಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ವರ್ಷಕ್ಕೆ ಒಂದು ವಾರ ಮಾತ್ರ ಹೆತ್ತವರನ್ನು ನೋಡುವುದಕ್ಕಿಂತ…’

ಭಾರತಕ್ಕೆ ಮರಳಲು ಇದ್ದ ಅತಿ ಮುಖ್ಯ ಕಾರಣಗಳಲ್ಲಿ ತಂದೆ-ತಾಯಿಯ ಜೊತೆ ಸಮಯ ಕಳೆಯುವುದೂ ಒಂದು ಎಂದು ಉಜ್ವಲ್ ಭಾವುಕರಾಗಿ ಬರೆದುಕೊಂಡಿದ್ದಾರೆ.

“ವಿದೇಶದಲ್ಲಿದ್ದಾಗ ಪ್ರತಿಯೊಂದು ಒಳ್ಳೆಯ ವಿಷಯವನ್ನೂ ಮುಂದೂಡುತ್ತಲೇ ಇರಬೇಕಿತ್ತು—ನಾಳೆ ಸ್ವಂತದ್ದೇನಾದರೂ ಕಟ್ಟೋಣ, ಮುಂದೊಂದು ದಿನ ಕುಟುಂಬದ ಜೊತೆ ಇರೋಣ, ಆಮೇಲೆ ಆರಾಮವಾಗಿ ಬದುಕೋಣ ಎಂದೇ ಯೋಚಿಸುತ್ತಿದ್ದೆ. ಆದರೆ ಇಲ್ಲಿಗೆ ಮರಳಿದ ಮೇಲೆ ನನ್ನ ಕನಸು ಮತ್ತು ನೈಜ ಜೀವನದ ನಡುವಿನ ಅಂತರ ಮಾಯವಾಯಿತು. ಅಮೆರಿಕದಲ್ಲೇ ಇದ್ದಿದ್ದರೆ ವರ್ಷಕ್ಕೆ ಕೇವಲ ಒಂದು ವಾರ ಮಾತ್ರ ಅಪ್ಪ-ಅಮ್ಮನನ್ನು ನೋಡಲು ಸಾಧ್ಯವಾಗುತ್ತಿತ್ತೇನೋ. ಹಣವನ್ನು ನಾವು ಮುಂದೆಯೂ ಗಳಿಸಬಹುದು, ಆದರೆ ಕಳೆದುಹೋದ ವರ್ಷಗಳನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

ನೆಟ್‌ವರ್ಕಿಂಗ್ ಮತ್ತು ನೈಜ ಬಾಂಧವ್ಯ:

ಅಮೆರಿಕದ ಸಿಯಾಟಲ್‌ನಲ್ಲಿದ್ದಾಗ ತಮ್ಮ ಸಂಪರ್ಕ ಜಾಲ ಕೇವಲ ‘ಲಿಂಕ್ಡ್‌ಇನ್’ ಅಥವಾ ಅಪರೂಪದ ಕಾಫಿ ಮೀಟಿಂಗ್‌ಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ಉಲ್ಲೇಖಿಸಿರುವ ಅವರು, ಭಾರತದಲ್ಲಿ ನೇರವಾಗಿ ಜನರನ್ನು ಭೇಟಿಯಾಗಿ ಗಟ್ಟಿಯಾದ ವೃತ್ತಿಪರ ಹಾಗೂ ವೈಯಕ್ತಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:

ಉಜ್ವಲ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ:

“ಅಮೆರಿಕದಲ್ಲಿ ವೀಸಾವನ್ನು ನೆಚ್ಚಿಕೊಂಡು ಬದುಕುವುದು ಕೊಲ್ಲಿ ದೇಶಗಳಲ್ಲಿ ನೌಕರಿ ಮಾಡಿದಂತೆ; ಒಮ್ಮೆ ಕಂಪನಿ ಲೇಆಫ್ ಮಾಡಿದರೆ ಇಡೀ ಆಟವೇ ಮುಗಿದುಹೋಗುತ್ತದೆ. ಹೀಗಾಗಿ ಸ್ವದೇಶಕ್ಕೆ ಮರಳುವುದೇ ಜಾಣತನ,” ಎಂದು ಹಲವರು ಅವರ ನಿರ್ಧಾರವನ್ನು ಸಮರ್ಥಿಸಿದ್ದಾರೆ.

ಇನ್ನು ಕೆಲವರು, “ಅಮೆರಿಕದಲ್ಲಿ ಇತ್ತೀಚೆಗೆ ವೀಸಾ ನಿಯಮಗಳು ಕಠಿಣವಾಗುತ್ತಿರುವುದರಿಂದ ನಿಮಗೆ ಅಲ್ಲಿ ಬದುಕು ಸಾಗಿಸುವುದು ಕಷ್ಟವಾಗಿತ್ತು, ಹೀಗಾಗಿ ಭಾರತಕ್ಕೆ ವಾಪಸ್ ಬರಬೇಕಾದ ಅನಿವಾರ್ಯತೆ ಇತ್ತು. ಇದನ್ನು ವೈಭವೀಕರಿಸಬೇಡಿ,” ಎಂದೂ ಕಮೆಂಟ್ ಮಾಡಿದ್ದಾರೆ.

ಡಾಲರ್ ಗಳಿಕೆಯ ಮೋಹ, ವೀಸಾ ಆತಂಕಗಳ ಮಧ್ಯೆ ನೆಮ್ಮದಿಯ ಜೀವನ ಹಾಗೂ ಕುಟುಂಬದ ಸಾಮಿಪ್ಯವೇ ಮುಖ್ಯ ಎಂದು ಸಾರುವ ಉಜ್ವಲ್ ಅವರ ಮಾತುಗಳು ವಿದೇಶದಲ್ಲಿರುವ ಅನೇಕ ಭಾರತೀಯರಿಗೆ ಮರುಚಿಂತನೆಗೆ ಹಚ್ಚಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular