ರಾಜೌರಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಹನ್ನೆರಡನೇ ತರಗತಿ ಮುಗಿಯುತ್ತಿದ್ದಂತೆ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣಕ್ಕಾಗಿ ಜೆಇಇ, ನೀಟ್ ಪರೀಕ್ಷೆಗಳ ಹಿಂದೆ ಬೀಳುವುದು ಸಾಮಾನ್ಯ. ಆದರೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ 18 ವರ್ಷದ ತನ್ವಿ ಶರ್ಮಾ ಸಾಂಪ್ರದಾಯಿಕ ವೃತ್ತಿ ಬದುಕಿನ ಹಾದಿಯನ್ನು ಬದಿಗಿಟ್ಟು, ಭಾರತೀಯ ಮರ್ಚೆಂಟ್ ನೇವಿ ಸೇರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿದ ಪೀರ್ ಪಂಜಾಲ್ ಪ್ರದೇಶದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
ಹನ್ನೆರಡನೇ ತರಗತಿಯಲ್ಲಿ ಪಿಸಿಎಂಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ) ವಿಷಯಗಳನ್ನು ಓದಿದ್ದ ತನ್ವಿ ಅವರಿಗೆ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಎಲ್ಲಾ ಅವಕಾಶಗಳಿದ್ದವು. ಆದರೆ, ಸಮಾಜದಲ್ಲಿ ಹೊಸ ಹಾದಿ ತುಳಿಯಬೇಕು ಮತ್ತು ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಅವರು ಈ ಕಠಿಣ ಕ್ಷೇತ್ರವನ್ನು ಆರಿಸಿಕೊಂಡರು.
ತರಬೇತಿ ಕ್ಲಾಸ್ ಇಲ್ಲದೆ ಸ್ವಂತ ಅಧ್ಯಯನ!
ಯಾವುದೇ ದುಬಾರಿ ತರಬೇತಿ ಸಂಸ್ಥೆಗಳ (ಕೋಚಿಂಗ್ ಸೆಂಟರ್) ಸಹಾಯವಿಲ್ಲದೆ, ಕೇವಲ ಒಂದು ತಿಂಗಳ ಸ್ವಯಂ ಅಧ್ಯಯನದ (ಸೆಲ್ಫ್ ಸ್ಟಡಿ) ಮೂಲಕ ತನ್ವಿ ಈ ಕಠಿಣ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ತೇರ್ಗಡೆಗೊಳಿಸಿದ್ದಾರೆ. ಪರೀಕ್ಷೆಗಾಗಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಗೋವಾದಂತಹ ದೂರದ ನಗರಗಳಿಗೆ ಪ್ರಯಾಣಿಸಿ ಪರೀಕ್ಷಾ ಕೇಂದ್ರಗಳನ್ನು ಹುಡುಕುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಕುಟುಂಬದವರಲ್ಲಿ ಸಹ ಈ ವೃತ್ತಿಯ ಬಗ್ಗೆ ಆತಂಕವಿತ್ತಾದರೂ, ತನ್ವಿ ಅವರ ದೃಢ ನಿರ್ಧಾರದ ಮುಂದೆ ಎಲ್ಲವೂ ಮಣಿಯಿತು.
ಲೋರೆಲ್ ಶಿಪ್ ಮ್ಯಾನೇಜ್‌ಮೆಂಟ್ ಕಂಪನಿಗೆ ಆಯ್ಕೆ
ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನಂತರ, ತನ್ವಿ ಸರ್ಕಾರಿ ಅಂಗಸಂಸ್ಥೆಯಾದ ಪ್ರಸಿದ್ಧ ‘ಟಿ.ಎಸ್. ಚಾಣಕ್ಯ’ ಕಡಲ ತರಬೇತಿ ಸಂಸ್ಥೆಯಲ್ಲಿ ಒಂದು ವರ್ಷದ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇದೀಗ ಪ್ರತಿಷ್ಠಿತ ‘ಲೋರೆಲ್ ಶಿಪ್ ಮ್ಯಾನೇಜ್‌ಮೆಂಟ್’ ಕಂಪನಿಯು ಇವರನ್ನು ತನ್ನ ಸೇವೆಗೆ ಆಯ್ಕೆ ಮಾಡಿಕೊಂಡಿದ್ದು, ಮುಂಬರುವ ಆಗಸ್ಟ್ ತಿಂಗಳಿನಿಂದ ತನ್ವಿ ಶರ್ಮಾ ಕಡಲ ಯಾನದ ಮೂಲಕ ತಮ್ಮ ವೃತ್ತಿ ಬದುಕನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ. ತಮ್ಮ ಈ ಯಶಸ್ಸಿಗೆ ತಾಯಿ ನೀಡಿದ ಪ್ರೋತ್ಸಾಹ ಮತ್ತು ಶಾಲೆಯ ಪ್ರಾಂಶುಪಾಲರ ಮಾರ್ಗದರ್ಶನವೇ ಕಾರಣ ಎಂದು ತನ್ವಿ ಹೆಮ್ಮೆಯಿಂದ ಸ್ಮರಿಸುತ್ತಾರೆ.
#WATCH | Rajouri, J&K: 18-year-old Tanvi Sharma joins Merchant Navy after one month of self-study. She cleared the examination in 2025, soon after completing Class 12.
She says, “After completing my 12th grade, I had many options because…I could have pursued either NEET or… pic.twitter.com/plIa6VLL6P
— ANI (@ANI) July 13, 2026

