ನವದೆಹಲಿ: ಫ್ರಾನ್ಸ್‌ನ ಎವಿಯನ್-ಲೆ-ಬೆನ್ಸ್‌ನಲ್ಲಿ ನಡೆದ ಜಿ7 (G7) ರಾಷ್ಟ್ರಗಳ ನಾಯಕರ ಶೃಂಗಸಭೆಯು ಜಾಗತಿಕ ರಾಜತಾಂತ್ರಿಕತೆಯ ಜೊತೆಗೆ ಮತ್ತೊಮ್ಮೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಮೆಲೋಡಿ (Melodi) ಜುಗಲ್‌ಬಂದಿಗೆ ಸಾಕ್ಷಿಯಾಗಿದೆ. ಉಕ್ರೇನ್ ಬಿಕ್ಕಟ್ಟು, ಅಮೆರಿಕ-ಇರಾನ್ ಒಪ್ಪಂದದಂತಹ ಗಂಭೀರ ವಿಷಯಗಳ ಚರ್ಚೆಯ ನಡುವೆಯೂ ಉಭಯ ನಾಯಕರ ಸ್ನೇಹಪೂರ್ಣ ಮಾತುಕತೆಯ ವಿಡಿಯೋ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.
ನಾವು ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಪ್ರಸಿದ್ಧ ಜೋಡಿ
ಶೃಂಗಸಭೆಯ ಜಾಗತಿಕ ನಾಯಕರ ಗ್ರೂಪ್ ಫೋಟೋಗೆ ನಿಲ್ಲುವ ಮುನ್ನ ಪ್ರಧಾನಿ ಮೋದಿ ಮತ್ತು ಮೆಲೋನಿ ಪರಸ್ಪರ ಕೈಕುಲುಕಿ ಅತ್ಯಂತ ಆತ್ಮೀಯವಾಗಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮಗಿರುವ ಜನಪ್ರಿಯತೆಯ ಬಗ್ಗೆ ಮೆಲೋನಿ ಬಳಿ ಪ್ರಸ್ತಾಪಿಸಿದಾಗ, ಅದಕ್ಕೆ ಮೆಲೋನಿ ಮುಗುಳ್ನಗುತ್ತಲೇ, “ಹೌದು, ನಾವು ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಪ್ರಸಿದ್ಧ ಜೋಡಿ” (Most Famous Couple on Instagram) ಎಂದು ಪ್ರತ್ಯುತ್ತರ ನೀಡಿದ್ದಾರೆ. ಮೆಲೋನಿ ಅವರ ಈ ಮಾತಿಗೆ ಮೋದಿ ಕೂಡ ನಕ್ಕಿರುವ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.
ಮೆಲೋಡಿಗೆ ಮೆಲೋಡಿ ಚಾಕೊಲೇಟ್’ ಸಿಹಿ ಟ್ವಿಸ್ಟ್
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಇಟಲಿ ಪ್ರವಾಸ ಕೈಗೊಂಡಾಗ ರೋಮ್‌ನಲ್ಲಿ ಇಬ್ಬರೂ ನಾಯಕರು ಸುತ್ತಾಟ ನಡೆಸಿ ಜಾಗತಿಕ ಗಮನ ಸೆಳೆದಿದ್ದರು. ಆ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ತಮಾಷೆಯಾಗಿ ಭಾರತದ ಪ್ರಸಿದ್ಧ ‘ಮೆಲೋಡಿ’ (Melody) ಟಾಫಿ ಪ್ಯಾಕೆಟ್ ಅನ್ನು ಮೆಲೋನಿ ಅವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಸಾಮಾಜಿಕ ಜಾಲತಾಣದ ಟ್ರೆಂಡ್‌ಗೆ ಸಿಹಿ ಟ್ವಿಸ್ಟ್ ಕೊಟ್ಟಿದ್ದರು.
ಆಗ ವಿಡಿಯೋ ಹಂಚಿಕೊಂಡಿದ್ದ ಮೆಲೋನಿ, “ಪ್ರಧಾನಿ ಮೋದಿ ನನಗೆ ತುಂಬಾ ಒಳ್ಳೆಯ ಟಾಫಿಯನ್ನು ಗಿಫ್ಟ್ ಕೊಟ್ಟಿದ್ದಾರೆ” ಎಂದು ಸಂಭ್ರಮಿಸಿದ್ದರು. ಅದಕ್ಕೆ ಮೋದಿ “ಮೆಲೋಡಿ” ಎಂದು ಉತ್ತರಿಸಿದ್ದರು.
ಏನಿದು ಮೆಲೋಡಿ ಡಿಪ್ಲೊಮಸಿ?
2023ರ ದ್ವಿಪಕ್ಷೀಯ ಭೇಟಿಯ ನಂತರ ಮೋದಿ ಮತ್ತು ಮೆಲೋನಿ ಹೆಸರನ್ನು ಸೇರಿಸಿ ನೆಟ್ಟಿಗರು ‘#Melodi’ ಎಂಬ ಹ್ಯಾಷ್‌ಟ್ಯಾಗ್ ಸೃಷ್ಟಿಸಿದ್ದರು.
2024: ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಹಾಕಿ “Hi friends, from #Melodi” ಎಂದು ಪೋಸ್ಟ್ ಮಾಡಿದ್ದರು.
2025: ಜಿ7 ಶೃಂಗಸಭೆಯಲ್ಲೂ “Hello, from the Melodi team” ಎಂದು ವಿಡಿಯೋ ಹಂಚಿಕೊಂಡಿದ್ದರು.
2026 (ಪ್ರಸ್ತುತ): ಈಗ ಫ್ರಾನ್ಸ್‌ನಲ್ಲೂ ಅದೇ ಟ್ರೆಂಡ್ ಮುಂದುವರಿದಿದ್ದು, ನೆಟ್ಟಿಗರು ಇವರನ್ನು “ಇಂಟರ್ನೆಟ್ ಜಗತ್ತಿನ ಅತ್ಯಂತ ಪವರ್‌ಫುಲ್ ಜೋಡಿ” ಎಂದು ಕೊಂಡಾಡುತ್ತಿದ್ದಾರೆ. ಮೆಲೋನಿ ಹಂಚಿಕೊಂಡ ಕೇವಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋಗೆ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ.
ಸಾಮಾಜಿಕ ಜಾಲತಾಣದಾಚೆಗಿನ ಬಲವಾದ ಬಾಂಧವ್ಯ
ಮೆಲೋಡಿ ಎಂಬುದು ಕೇವಲ ಇಂಟರ್ನೆಟ್ ಮೀಮ್ ಅಥವಾ ಟ್ರೆಂಡ್ ಮಾತ್ರವಲ್ಲ, ಇದು ಭಾರತ ಮತ್ತು ಇಟಲಿ ನಡುವಿನ ಗಟ್ಟಿಯಾದ ರಾಜತಾಂತ್ರಿಕ ಒಕ್ಕೂಟದ ಸಂಕೇತವಾಗಿದೆ. ಭಾರತ–ಮಧ್ಯಪ್ರಾಚ್ಯ–ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಯಲ್ಲಿ ಇಟಲಿ ಪ್ರಮುಖ ಪಾಲುದಾರನಾಗಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಈಗಾಗಲೇ 16.77 ಬಿಲಿಯನ್ ಡಾಲರ್‌ಗಳನ್ನು ದಾಟಿದೆ. ಮೋದಿ-ಮೆಲೋನಿ ಅವರ ಈ ವೈಯಕ್ತಿಕ ಸ್ನೇಹ ಉಭಯ ರಾಷ್ಟ್ರಗಳ ಸಂಬಂಧಕ್ಕೆ ಹೊಸ ಆಯಾಮ ತಂದುಕೊಟ್ಟಿದೆ.

