ಶಿವಮೊಗ್ಗ: ಮೆಕ್ಕೆಜೋಳದ ಹೊಲದಲ್ಲಿ ರೈತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳವಳ್ಳಿಯಲ್ಲಿ ನಡೆದಿದೆ.
ಕೈಕಾಲುಗಳನ್ನು ಕಟ್ಟಿದ ರೀತಿಯಲ್ಲಿ 31 ವರ್ಷದ ಒಡಕೇಶಪ್ಪ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ ಮೆಕ್ಕೆಜೋಳದ ಹೊಲಕ್ಕೆ ಹೋಗುವುದಾಗಿ ತೆರಳಿದ್ದ ಒಡಕೇಶಪ್ಪ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದ್ದಾರೆ.
ಮೆಕ್ಕೆಜೋಳದ ಹೊಲದಲ್ಲಿ ಹುಡುಕಾಟ ನಡೆಸಿದಾಗ ಒಡಕೇಶಪ್ಪ ಮೃತದೇಹ ಪತ್ತೆಯಾಗಿದೆ. ಕೈಕಾಲುಗಳನ್ನು ಕಟ್ಟಿ ಅವರನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಎ.ಜೆ. ಕಾರಿಯಾಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

