ನವದೆಹಲಿ: ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದೆ. ತುರ್ತು ಚರ್ಚೆಗೆ ಅವಕಾಶ ನೀಡುವಂತೆ ಕೋರಿದೆ.
ಮೇಕೆಡಾಟು ಯೋಜನೆಗೆ ಸಂಬಂಧಿಸಿದಂತೆ ಡಿಎಂಕೆ ಸಂಸದ ತಿರುಚಿ ಶಿವ, ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದು, ನಿಯಮ 267ರ ಅಡಿಯಲ್ಲಿ ತುರ್ತು ಚರ್ಚೆಗೆ ಪಟ್ಟು ಹಿಡಿದಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದು, ಮೇಕೆದಾಟು ಯೋಜನೆ ತಡೆಯಲು ಮಧ್ಯಸ್ಥಿಕೆಗೆ ಮಂಡಳಿ ರಚಿಸುವಂತೆ ಆಗ್ರಹಿಸಿದ್ದಾರೆ.
ಮೇಕೆದಾಟು ಯೋಜನೆ ವಿಚಾರವಾಗಿ ಈ ಹಿಂದೆ ಸುಪ್ರೀಂ ಕೋರ್ಟ್, ಮೇಕೆದಾಟು ವಿಚಾರವನ್ನು ಕೇಂದ್ರ ಜಲ ಆಯೋಗ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿತ್ತು. ಕೇಂದ್ರ ಜಲಶಕ್ತಿ ಆಯೋಗ ಕೂಡ ಕರ್ನಾಟಕದ ಮೇಕೆದಾಟು ಯೋಜನೆಗೆ ಬೇರೆ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ತಿಳಿಸಿತ್ತು. ಮೇಲಿನ ರಾಜ್ಯಗಳು ಅಣೆಕಟ್ಟನ್ನು ನಿರ್ಮಿಸಬಹುದು ಮತ್ತು ತಮಿಳುನಾಡಿಗೆ ಬರಬೇಕಾದ ನೀರಿನ ಪಾಲನ್ನು ಬಿಟ್ಟರೆ ಸಾಕು ಎಂದು ಸ್ಪಷ್ಟಪಡಿಸಿದೆ. ಈ ಸ್ಪಷ್ಟೀಕರಣದ ನಂತರವೂ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆಯ ಮೂಲಕ ಚರ್ಚೆಗೆ ಒತ್ತಾಯಿಸಿದೆ.

