ಸ್ಯಾಂಡಲ್‌ವುಡ್‌ನ ಪ್ರೀತಿಯ ಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ 8ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೇಘನಾ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಚೀರು ಅವರ ನೆನಪಿನಲ್ಲಿ ಸದಾ ಇರುವ ಮೇಘನಾ, “ನಾನು ಇಡುವ ಪ್ರತಿ ಹೆಜ್ಜೆಯಲ್ಲೂ ನಿನ್ನನ್ನು ಅನುಭವಿಸುತ್ತೇನೆ” ಎನ್ನುತ್ತಲೇ ತಮ್ಮ ವೃತ್ತಿಜೀವನದ ಮೈಲಿಗಲ್ಲನ್ನು ಘೋಷಿಸಿದ್ದಾರೆ.
ರಜನಿಕಾಂತ್ ಜೊತೆ ನಟಿಸುವ ಕನಸು ಚಿರಂಜೀವಿ ಸರ್ಜಾ ಅವರಿಗೆ ರಜನಿಕಾಂತ್ ಎಂದರೆ ಪಂಚಪ್ರಾಣವಾಗಿತ್ತು. ರಜನಿಕಾಂತ್ ಅವರೊಂದಿಗೆ ನಟಿಸಬೇಕು ಎಂಬುದು ಚೀರು ಮತ್ತು ಮೇಘನಾ ಅವರ ಜಂಟಿ ಕನಸಾಗಿತ್ತು. ಈಗ ಆ ಕನಸು ‘ಜೈಲರ್ 2’ ಮೂಲಕ ನನಸಾಗುತ್ತಿದೆ. ರಜನಿಕಾಂತ್ ಅವರನ್ನು ‘ಭಾರತೀಯ ಚಿತ್ರರಂಗದ ದೇವರು’ ಎಂದು ಕರೆದಿರುವ ಮೇಘನಾ, ಈ ಮೈಲಿಗಲ್ಲನ್ನು ತಮ್ಮ ಪತಿ ಚಿರಂಜೀವಿ ಸರ್ಜಾಗೆ ಅರ್ಪಿಸಿದ್ದಾರೆ.
ಭಾರವಾದ ಮನಸ್ಸಿನಿಂದ ಪೋಸ್ಟ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚೀರು ಅವರೊಂದಿಗಿನ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ಅವರು, “ಈ ವಾರ್ಷಿಕೋತ್ಸವ ಕೇವಲ ಒಂದು ದಿನಾಂಕವಲ್ಲ ಚೀರು, ಅದೊಂದು ಭಾವನೆ. ಇಂದು ನಾನು ಏನನ್ನು ಸಾಧಿಸಿದ್ದೇನೋ ಅದು ನಮ್ಮಿಬ್ಬರ ಕನಸಾಗಿತ್ತು. ಈ ಯಶಸ್ಸು ನಿನಗೆ ಸೇರಿದ್ದು” ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ರಜನಿಕಾಂತ್ ಅವರು ಚೀರು ಹೆಸರಿಗೆ ನೀಡಿರುವ ಆಟೋಗ್ರಾಫ್ ಹಾಗೂ ತಮ್ಮ ಮಗ ರಾಯನ್ ಸರ್ಜಾ ರಜನಿಕಾಂತ್ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸುಮಾರು ವರ್ಷಗಳ ನಂತರ ಮೇಘನಾ ರಾಜ್ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದು, ಅದು ಕೂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬ್ಲಾಕ್ ಬಸ್ಟರ್ ಚಿತ್ರದ ಸೀಕ್ವೆಲ್ ಮೂಲಕ ಎಂಬುದು ಅಭಿಮಾನಿಗಳಲ್ಲಿ ಸಂಸತ ತಂದಿದೆ. ನೆಚ್ಚಿನ ನಟಿಯ ಈ ಯಶಸ್ಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

