ನೂತನ ಸಂಸತ್‌ ಭವನದ ವಾಸ್ತುಶಿಲ್ಪಿ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಭಾನುವಾರದಂದು ನಡೆಯಬೇಕಿದ್ದ ಐಪಿಎಲ್ ಫೈನಲ್‌ನ ಸದ್ದನ್ನೂ ಹಿಂದಿಕ್ಕಿದ ನೂತನ ಸಂಸತ್‌ ಭವನದ ಉದ್ಘಾಟನೆಯ ವಿಚಾರವು ಮುಖ್ಯವಾಹಿನಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು.

ತ್ರಿಕೋನಾಕೃತಿಯಲ್ಲಿರುವ ಸಂಸತ್‌ ಭವನದ ವಾಸ್ತುಶಿಲ್ಪಿ ಬಿಮಲ್ ಪಟೇಲ್ ಇದೇ ವೇಳೆ ತಮ್ಮ ಈ ವಿನೂತನ ವಿನ್ಯಾಸದಿಂದ ಸುದ್ದಿಯಲ್ಲಿದ್ದಾರೆ. ದೆಹಲಿಯ ಸೆಂಟ್ರಲ್ ವಿಸ್ತಾ ಅಲ್ಲದೇ ಕಾಶಿ ವಿಶ್ವನಾಥ ಕಾರಿಡಾರ್‌ನಂಥ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ ಪಟೇಲ್.

ಯಾರಿದು ಬಿಮಲ್ ಪಟೇಲ್ ?

ನಗರ ಯೋಜನೆ ಹಾಗೂ ವಿನ್ಯಾಸದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಬಿಮಲ್ ಪಟೇಲ್ ಸದ್ಯ ಅಹಮದಾಬಾದ್‌ನ ಸೆಪ್ಟ್‌ (ಪರ್ಯಾವರಣ ಯೋಜನೆ ಹಾಗೂ ತಂತ್ರಜ್ಞಾನ) ವಿವಿಯ ಅಧ್ಯಕ್ಷರಾಗಿದ್ದಾರೆ. ವಾಸ್ತುಶಿಲ್ಪ, ಯೋಜನೆ ಹಾಗೂ ಪ್ರಾಜೆಕ್ಟ್‌ ನಿರ್ವಹಣೆ ಸಂಸ್ಥೆಯಾದ ಪ್ಲಾನಿಂಗ್ & ಮ್ಯಾನೇಜ್ಮೆಂಟ್ ಪ್ರೈ ಲಿನಲ್ಲಿ ಎಚ್‌ಸಿಪಿ ವಿನ್ಯಾಸದ ನೇತೃತ್ವ ವಹಿಸಿದ್ದಾರೆ. ಇವರ ತಂದೆ ಹಸ್ಮುಖ್ ಸಿ ಪಟೇಲ್ 1960ರಲ್ಲಿ ಎಚ್‌ಸಿ ಡಿಸೈನ್, ಪ್ಲಾನಿಂಗ್ & ಮ್ಯಾನೇಜ್ಮೆಂಟ್ ಪ್ರೈ.ಲಿ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್, ಲೊಯೊಲಾ ಹಾಲ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದ ಪಟೇಲ್, ಸೆಪ್ಟ್‌ನ ವಾಸ್ತುಶಿಲ್ಪ ಶಾಲೆಯಲ್ಲಿ ಉನ್ನತ ವ್ಯಾಸಂಗ ಪೂರೈಸಿದ್ದಾರೆ. 1995ರಲ್ಲಿ ಅಮೆರಿಕದ ಯುಸಿ ಬರ್ಕ್ಲಿಯಿಂದ ಪಿಎಚ್‌ಡಿ ಪೂರೈಸಿದ ಪಟೇಲ್, ಅದಕ್ಕೂ ಮುಂಚೆಯೇ, 1990ರಿಂದ, ತಮ್ಮ ತಂದೆಯೊಂದಿಗೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದರು.

ಕಳೆದ 35 ವರ್ಷಗಳಿಂದ ದೇಶಾದ್ಯಂತ ಬಹುದೊಡ್ಡ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಪಟೇಲ್, ಸಾಬರಮತಿ ರಿವರ್‌ಫ್ರಂಟ್ ಯೋಜನೆ, ಹೈದರಾಬಾದ್‌ನಲ್ಲಿರುವ ಆಗಾ ಖಾನ್ ಅಕಾಡೆಮಿ, ಹೈದರಾಬಾದ್‌ನ ಐಐಟಿ, ಕಾಶಿ ವಿಶ್ವನಾಥ ಕಾರಿಡಾರ್‌‌, ಮುಂಬೈ ಬಂದರಿನ ಅಭಿವೃದ್ಧಿಯಂಥ ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ.

ವಾಸ್ತುಶಿಲ್ಪದ ಕ್ಷೇತ್ರದಲ್ಲಿ ತಮ್ಮ ಮಹತ್ತರದ ಸಾಧನೆಯಿಂದಾಗಿ ಪಟೇಲ್‌ಗೆ 1992ರಲ್ಲಿ ಆಗಾ ಖಾನ್ ಪ್ರಶಸ್ತಿ, 2019ರಲ್ಲಿ ಪದ್ಮ ಶ್ರೀ, 1998ರಲ್ಲಿ ವಿಶ್ವ ಸಂಸ್ಥೆಯ ಮಾನವ ಪುನರ್ವಸತಿಯ ಶ್ರೇಷ್ಠತಾ ಪುರಸ್ಕಾರ, 2001ರಲ್ಲಿ ವಿಶ್ವ ವಾಸ್ತುಶಿಲ್ಪ ಪುರಸ್ಕಾರಗಳು ಸಂದಿವೆ. 2006ರಲ್ಲಿ ನಗರ ಯೋಜನೆ ಹಾಗೂ ವಿನ್ಯಾಸದಲ್ಲಿ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ ಪಟೇಲ್.

ನೂತನ ಸಂಸತ್‌ ಭವನದ ನಿರ್ಮಾಣಕ್ಕೆ ಬಿಮಲ್ ಪಟೇಲ್‌ರ ಎಚ್‌ಸಿಪಿ ಡಿಸೈನ್ಸ್‌ ಸೆಂಟ್ರಲ್ ವಿಸ್ತಾ ಯೋಜನೆಯ ಕಾಂಟ್ರಾಕ್ಟ್‌ ತನ್ನದಾಗಿಸಿಕೊಂಡಿತ್ತು. ಈ ನಿರ್ಮಾಣ ಕಾರ್ಯದ ಸಂಬಂಧ ಪಟೇಲ್‌ರ ಸಂಸ್ಥೆಗೆ ಕನ್ಸಲ್ಟಿಂಗ್ ಶುಲ್ಕವಾಗಿ 229.75 ಕೋಟಿ ರೂ.ಗಳನ್ನು ಪಾವತಿಸಲಾಗುವುದು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಸೆಂಟ್ರಲ್ ವಿಸ್ತಾನ ಮಾಸ್ಟರ್‌ ಪ್ಲಾನ್ ಜವಾಬ್ದಾರಿ ಹೊತ್ತಿದ್ದ ಎಚ್‌ಸಿಪಿ, ಕಟ್ಟಡ ಹಾಗೂ ಪ್ರದೇಶಾಭಿವೃದ್ಧಿಯ ವಿನ್ಯಾಸ, ಭೂಪ್ರದೇಶ ಅಭಿವೃದ್ಧಿ, ವೆಚ್ಚಗಳ ಲೆಕ್ಕಾಚಾರ, ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಗಳ ಸಮ್ಮಿಲಗೊಳಿಸುವ ಕಾರ್ಯವನ್ನು ನಿಭಾಯಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read