ಬೆಂಗಳೂರು: ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಿಯನಾದ ವ್ಯಕ್ತಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಯುವತಿ ಹಾಗೂ ಆಕೆಯ ಕುಟುಂಬಕ್ಕೆ ಬರೋಬ್ಬರಿ 1.75 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿಜಯ್ ರಾಜ್ ಗೌಡ ಎಂಬಾತ 2024ರಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಯುವತಿಗೆ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದಾನೆ. ತಾನು ದೊಡ್ಡ ಉದ್ಯಮಿ 715 ಕೋಟಿ ಆಸ್ತಿಯಿದೆ ಎಂದು ಹೇಳಿಕೊಂಡು ಬಿಲ್ಡಪ್ ಕೊಟ್ಟಿದ್ದ. ಅಲ್ಲದೇ ತನ್ನ ತಂದೆ ನಿವೃತ್ತ ತಹಶಿಲ್ದಾರ್ ಪರಿಚಯಿಸಿದ್ದ. ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಕೆಂಗೇರಿ ಬಳಿ ಯುವತಿ ಹಾಗೂ ಆಕೆಯ ಕುಟುಂಬವನ್ನು ಕರೆದೊಯ್ದು ಮನೆಯವರಿಗೂ ಪರಿಚಯಿಸಿದ್ದ.
ಕೆಲ ದಿನಗಳ ಬಳಿಕ ಆಸ್ತಿ ವಿಚಾರವಾಗಿ ತನ್ನ ಹಾಗೂ ಕುಟುಂಬದ ವಿರುದ್ಧ ಇಡಿಯಲ್ಲಿ ಕೇಸ್ ದಾಖಲಾಗಿದೆ. ಅಕೌಂಟ್ ಪ್ರಾಬ್ಲಮ್ ಆಗಿದೆ ಎಂದು ಹೇಳಿ ಅದಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳು, ಕೋರ್ಟ್ ಪ್ರತಿಗಳನ್ನು ತೋರಿಸಿದ್ದ. ಹಣದ ಅಗತ್ಯವಿದೆ. ತಂದೆಗೆ ಅನಾರೋಗ್ಯ ಎಂದು ನಂಬಿಸಿ ಆರಂಭದಲ್ಲಿ 15 ಸಾವಿರ ರೂಪಾಯಿ ಹಣವನ್ನು ಯುವತಿಯಿಂದ ಪಡೆದಿದ್ದಾನೆ. ಬಳಿಕ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಎಂದು ಯುವತಿಯ ಹೆಸರಲ್ಲಿ ಲೋನ್ ಪಡೆದಿದ್ದ. ಬಳಿಕ ಯುವತಿ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದ. ಯುವತಿಯ ಸಂಬಂಧಿಕರ ಬಳಿಯೂ ಕಥೆ ಕಟ್ಟಿ ಲಕ್ಷ ಲಕ್ಷ ಹಣ ಪಡೆದುಕೊಂಡಿದ್ದಾನೆ. ಹೀಗೆ ಹಂತ ಹಂತವಾಗಿ ಯುವತಿ ಹಾಗೂ ಆಕೆಯ ಕಡೆಯವರಿಂದ ಬರೋಬ್ಬರಿ 1.75 ಕೋಟಿ ಹಣ ಪಡೆದುಕೊಂಡಿದ್ದಾನೆ.
ಹಣ ವಾಪಸ್ ಕೇಳಿದ್ದಕ್ಕೆ ಒಮ್ಮೆ 22 ಲಕ್ಷ ರೂಪಾಯಿ ವಾಪಸ್ ಕೊಟ್ಟಿದ್ದನಂತೆ. ಉಳಿದ ಹಣ ಕೇಳಿದರೆ ಹಣ ಕೊಡಲು ಹಿಂದೇಟು ಹಾಕಿದ್ದಾನೆ. ಯುವತಿ ಮನೆಯವರು, ಆಕೆಯ ಸ್ನೇಹಿತರು ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಆತನ ಹಿನ್ನೆಲೆ ಪರಿಶೀಲಿಸಿದಾಗ ವಿಜಯ್ ರಾಜ್ ಗೌಡ ಮಹಾನ್ ವಂಚಕ ಎಂಬುದು ಗೊತ್ತಾಗಿದೆ. ಕಳೆದ ವರ್ಷ ಯುವತಿ ವೈಟ್ ಫೀಲ್ಡ್ ಠಾಣೆಯಲ್ಲಿ ವಿಜಯ್ ರಾಜ್ ವಿರುದ್ಧ ದೂರು ನೀಡಿದ್ದರು. ತನಿಖೆ ವೇಳೆ ವಿಜಯ್ ರಾಜ್ ಗೌಡಗೆ ಅದಾಗಲೇ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ವಿಜಯ್ ವಂಚನೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ ಎಂಬುದು ಬಯಲಾಗಿದೆ. ವಿಷಯ ತಿಳಿದ ಯುವತಿ ಶಾಕ್ ಆಗಿದ್ದಾಳೆ. ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

