AI ಮೇಲಿನ ಹೂಡಿಕೆ ಹೆಚ್ಚಳದ ನಡುವೆ ಜಾಗತಿಕ ಪಾವತಿ ದೈತ್ಯದ ಮಹತ್ವದ ನಿರ್ಧಾರ ಜಾಗತಿಕ ಡಿಜಿಟಲ್ ಪಾವತಿ ಸಂಸ್ಥೆಯಾದ ವೀಸಾ (Visa) ತನ್ನ ಇತ್ತೀಚಿನ ವರ್ಷಗಳಲ್ಲೇ ಅತಿದೊಡ್ಡ ಉದ್ಯೋಗ ಕಡಿತವನ್ನು ಘೋಷಿಸಿದ್ದು, ಸುಮಾರು 2,600 ಉದ್ಯೋಗಿಗಳನ್ನು, ಅಂದರೆ ತನ್ನ ಒಟ್ಟು ಸಿಬ್ಬಂದಿಯ ಸುಮಾರು 7% ಮಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಿದೆ.
ಈ ಉದ್ಯೋಗ ಕಡಿತವು ಭಾರತ ಸೇರಿದಂತೆ ಹಲವು ದೇಶಗಳ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ್ದು, ವಿಶೇಷವಾಗಿ ತಂತ್ರಜ್ಞಾನ (Technology) ಮತ್ತು ಉತ್ಪನ್ನ ಅಭಿವೃದ್ಧಿ (Product) ವಿಭಾಗದ ಸಿಬ್ಬಂದಿ ಹೆಚ್ಚು ಬಾಧಿತರಾಗಿದ್ದಾರೆ ಎಂದು ವರದಿಯಾಗಿದೆ. 2025ರ ವಾರ್ಷಿಕ ವರದಿ ಪ್ರಕಾರ, ವೀಸಾದಲ್ಲಿ ಸುಮಾರು 34,100 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು. ಭಾರತದಲ್ಲೇ 3,500ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ನಲ್ಲಿ ಕಂಪನಿಯ ಪ್ರಮುಖ ತಂತ್ರಜ್ಞಾನ ಹಾಗೂ ಕಾರ್ಪೊರೇಟ್ ಕೇಂದ್ರಗಳಿವೆ.
ಉದ್ಯೋಗ ಕಡಿತಕ್ಕೆ ಕಾರಣವೇನು?
ವೀಸಾ ಈ ಕ್ರಮವು ಆದಾಯ ಕುಸಿತ ಅಥವಾ ಆರ್ಥಿಕ ಸಂಕಷ್ಟದಿಂದ ತೆಗೆದುಕೊಳ್ಳಲಾದ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಾಗಿ, ಸಂಸ್ಥೆಯನ್ನು ಹೆಚ್ಚು ಕಾರ್ಯಕ್ಷಮಗೊಳಿಸುವುದು ಹಾಗೂ ಭವಿಷ್ಯದಲ್ಲಿ ಬೆಳವಣಿಗೆ ತರುವ ಹೊಸ ತಂತ್ರಜ್ಞಾನಗಳು ಮತ್ತು ವ್ಯವಹಾರಗಳಲ್ಲಿ ಹೂಡಿಕೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಕಂಪನಿಯು ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI), ಸ್ವಯಂಚಾಲಿತ ವ್ಯವಸ್ಥೆಗಳು (Automation) ಹಾಗೂ ದೀರ್ಘಕಾಲೀನ ಬೆಳವಣಿಗೆಯ ಕ್ಷೇತ್ರಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುತ್ತಿದೆ.
AIಗೆ ಹೆಚ್ಚಿನ ಆದ್ಯತೆ
ವೀಸಾ ಸಿಇಒ ರಯಾನ್ ಮ್ಯಾಕ್ಇನರ್ನಿ (Ryan McInerney) ಅವರ ಪ್ರಕಾರ, ಕಂಪನಿಯು ಕೇವಲ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ AIಗಷ್ಟೇ ಸೀಮಿತವಾಗದೇ, ಮಾನವ ಹಸ್ತಕ್ಷೇಪವಿಲ್ಲದೆ ಅನೇಕ ಕಾರ್ಯಗಳನ್ನು ನಿರ್ವಹಿಸಬಲ್ಲ ‘ಏಜೆಂಟಿಕ್ AI’ (Agentic AI) ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಅವರು, “ವೀಸಾ, ನಮ್ಮ ಗ್ರಾಹಕರು ಮತ್ತು ಪಾಲುದಾರರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಹೆಚ್ಚಿನ ಬೆಳವಣಿಗೆಯ ಅವಕಾಶಗಳಿರುವ ಕ್ಷೇತ್ರಗಳಲ್ಲಿ ಮರುಹೂಡಿಕೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ. AI ಪರಿಣಾಮವೇ? ಸಾಫ್ಟ್ವೇರ್ ಅಭಿವೃದ್ಧಿ, ಗ್ರಾಹಕ ಸೇವೆ, ಕಾರ್ಯಾಚರಣೆ ಹಾಗೂ ಆಂತರಿಕ ಪ್ರಕ್ರಿಯೆಗಳಲ್ಲಿ AI ಮತ್ತು Automation ಬಳಕೆ ಹೆಚ್ಚಾಗುತ್ತಿರುವುದರಿಂದ, ಅದೇ ಪ್ರಮಾಣದ ಕೆಲಸಕ್ಕೆ ಕಡಿಮೆ ಸಿಬ್ಬಂದಿಯೇ ಸಾಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವೀಸಾದ ಈ ಉದ್ಯೋಗ ಕಡಿತವೂ ಇದೇ ಬದಲಾವಣೆಯ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ. ಇತರ ಕಂಪನಿಗಳಲ್ಲೂ ಉದ್ಯೋಗ ಕಡಿತ ಈ ವರ್ಷವೇ ವೀಸಾದ ಪ್ರಮುಖ ಪ್ರತಿಸ್ಪರ್ಧಿ ಮಾಸ್ಟರ್ಕಾರ್ಡ್ (Mastercard) ತನ್ನ ಜಾಗತಿಕ ಉದ್ಯೋಗಿಗಳಲ್ಲಿ 4% ಕಡಿತ ಮಾಡುವುದಾಗಿ ಘೋಷಿಸಿತ್ತು. ಅದೇ ರೀತಿ ಫಿನ್ಟೆಕ್ ಸಂಸ್ಥೆ ಬ್ಲಾಕ್ (Block) ಕೂಡ ಸುಮಾರು 4,000 ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು

