ಹೊಸ ವರ್ಷಾಚರಣೆ ವೇಳೆ ‘ಸ್ವಿಟ್ಜರ್ಲೆಂಡ್’ನಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಐಷಾರಾಮಿ ಆಲ್ಪೈನ್ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್ ಮೊಂಟಾನಾದಲ್ಲಿ ಬಾರ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ಗುರುವಾರ ಮುಂಜಾನೆ ತಿಳಿಸಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ ಘಟನೆಯ ನಂತರ ಬಾರ್‌ನಿಂದ ದೊಡ್ಡ ಪ್ರಮಾಣದ ಹೊಗೆ ಹೊರಬರುತ್ತಿರುವುದನ್ನು ತೋರಿಸಲಾಗಿದೆ.
ಈ ಸ್ಫೋಟಕ್ಕೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ನೈಋತ್ಯ ಸ್ವಿಟ್ಜರ್ಲೆಂಡ್‌ನ ವಾಲಿಸ್ ಕ್ಯಾಂಟನ್‌ನ ಪೊಲೀಸ್ ವಕ್ತಾರ ಗೇಟನ್ ಲಾಥಿಯಾನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಕಾನ್‌ಸ್ಟೆಲೇಶನ್ ಬಾರ್‌ನಲ್ಲಿ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದಾಗ ಬೆಳಗಿನ ಜಾವ ಸುಮಾರು 1:30 ಕ್ಕೆ ಈ ಸ್ಫೋಟ ಸಂಭವಿಸಿದೆ. ರಕ್ಷಣಾ ಮತ್ತು ತನಿಖಾ ಕಾರ್ಯ ಇನ್ನೂ ನಡೆಯುತ್ತಿದೆ ಎಂದು ಲಾಥಿಯಾನ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳಲ್ಲಿ ಹೊಸ ವರ್ಷದ ಆಚರಣೆ ನಡೆಯುತ್ತಿದ್ದ ಬಾರ್‌ನಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಬಹುದು.ಕ್ರಾನ್ಸ್-ಮೊಂಟಾನಾ ಎಂಬುದು ಸ್ವಿಟ್ಜರ್ಲೆಂಡ್‌ನ ರಾಜಧಾನಿ ಬರ್ನ್‌ನಿಂದ ಸುಮಾರು ಎರಡು ಗಂಟೆಗಳ ದೂರದಲ್ಲಿರುವ ವ್ಯಾಲೈಸ್ ಪ್ರಾಂತ್ಯದ ಆಲ್ಪ್ಸ್ ಪರ್ವತಗಳ ಹೃದಯಭಾಗದಲ್ಲಿರುವ ಒಂದು ಐಷಾರಾಮಿ ಸ್ಕೀ ರೆಸಾರ್ಟ್ ಪಟ್ಟಣವಾಗಿದೆ.
87 ಮೈಲುಗಳಷ್ಟು ಉದ್ದದ ಪಾದಚಾರಿ ಮಾರ್ಗಗಳನ್ನು ಹೊಂದಿರುವ ಈ ಪಟ್ಟಣವು ಬ್ರಿಟಿಷ್ ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ. ಜನವರಿ ಅಂತ್ಯದಲ್ಲಿ, ಕ್ರಾನ್ಸ್-ಮೊಂಟಾನಾ ರೆಸಾರ್ಟ್ ಪ್ರತಿಷ್ಠಿತ ವೇಗದ ಸ್ಕೀಯಿಂಗ್ ಸ್ಪರ್ಧೆಯಾದ FIS ವರ್ಲ್ಡ್ ಕಪ್ ಅನ್ನು ಆಯೋಜಿಸಲಿದೆ.

