ಉತ್ತರ ಪ್ರದೇಶದ ಆಗ್ರಾದಲ್ಲಿ ಬುಧವಾರ ಮಧ್ಯಾಹ್ನ ಸಾರ್ವಜನಿಕವಾಗಿ ಅತ್ಯಂತ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. 25 ವರ್ಷದ ವಿವಾಹಿತ ಯುವಕನೊಬ್ಬ ತನ್ನ ಪ್ರೇಮಿಯ ಮೇಲೆ ಸಾರ್ವಜನಿಕ ರಸ್ತೆಯಲ್ಲೇ ಗುಂಡಿನ ದಾಳಿ ನಡೆಸಿ, ಬಳಿಕ ಜನರು ಸುತ್ತವರಿಯುತ್ತಿದ್ದಂತೆ ತಾನೂ ಅದೇ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಮಾಲಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಫೈರ್ ಕಾಲೋನಿಯಲ್ಲಿ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ನಡೆದಿದೆ. ಹತ್ರಾಸ್ ಮೂಲದ ಹಾಗೂ ಆಗ್ರಾದಲ್ಲಿ ಬಾಡಿಗೆ ಕೊಠಡಿಯಲ್ಲಿದ್ದುಕೊಂಡು ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಹನಿ ಎಂಬ ಯುವತಿ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಸೈಯಾ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಈತನಿಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರದಂದು ಹನಿ ತನ್ನ ಸ್ನೇಹಿತೆಯೊಂದಿಗೆ ಅರುಣ್ ಕುಮಾರ್ನನ್ನು ಭೇಟಿಯಾಗಲು ಸಫೈರ್ ಕಾಲೋನಿಗೆ ಬಂದಿದ್ದರು. ಈ ವೇಳೆ ಇಬ್ಬರ ನಡುವೆ ಸಾರ್ವಜನಿಕ ರಸ್ತೆಯಲ್ಲೇ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಅರುಣ್ ತನ್ನ ಪಿಸ್ತೂಲ್ ತೆಗೆದು ಹನಿ ಕಡೆಗೆ ಗುಂಡು ಹಾರಿಸಿದ್ದಾನೆ. ಗುಂಡು ತಗಲಿ ಯುವತಿ ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದು, ಭಯಗೊಂಡ ಆಕೆಯ ಸ್ನೇಹಿತೆ ಸ್ಥಳದಿಂದ ಓಡಿಹೋಗಿದ್ದಾಳೆ.
ಗುಂಡಿನ ಸದ್ದು ಕೇಳಿ ಸುತ್ತಮುತ್ತಲಿನ ನಿವಾಸಿಗಳು ರಸ್ತೆಗೆ ಧಾವಿಸಿ ಬಂದಿದ್ದಾರೆ. ಜನರು ತನ್ನನ್ನು ಸುತ್ತವರಿಯುತ್ತಿರುವುದನ್ನು ಮತ್ತು ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿದ್ದ ಅರುಣ್, ತಕ್ಷಣವೇ ಅದೇ ಪಿಸ್ತೂಲನ್ನು ತನ್ನ ಹಣೆಗೆ ಇಟ್ಟುಕೊಂಡು ಗುಂಡು ಹಾರಿಸಿಕೊಂಡಿದ್ದಾನೆ. ತೀವ್ರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಆಗ್ರಾ ಪೊಲೀಸರಿಗೆ ಮುಖ್ಯವಾದ ಮಾಹಿತಿ ಲಭಿಸಿದೆ. ಇಬ್ಬರ ನಡುವೆ ಸುಮಾರು 1.5 ತಿಂಗಳ ಹಿಂದೆ ಬ್ರೇಕಪ್ ಆಗಿತ್ತು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಈ ಹಿಂದೆ ಹನಿ ಅರುಣ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣದ ದೂರು ನೀಡಿದ್ದರು. ಆದರೆ ನಂತರ ಕೋರ್ಟ್ನಲ್ಲಿ ಹೇಳಿಕೆ ನೀಡಿ ದೂರನ್ನು ವಾಪಸ್ ಪಡೆದಿದ್ದರು. ಈ ಹಳೆಯ ವ್ಯಾಜ್ಯ, ಬ್ರೇಕಪ್ ಹಾಗೂ ಬುಧವಾರ ನಡೆದ ಜಗಳಕ್ಕೆ ಇರುವ ಲಿಂಕ್ ಏನು ಎಂಬುದನ್ನು ತಿಳಿಯಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

