ಹಿಂದೂ ವಿವಾಹ ಪದ್ಧತಿ ಕುರಿತು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ‘ಸಪ್ತಪದಿ’ (ಏಳು ಹೆಜ್ಜೆಗಳು) ಸೇರಿದಂತೆ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸದೇ, ಕೇವಲ ಮದುವೆ ನೋಂದಣಿ ಪ್ರಮಾಣಪತ್ರ (Marriage Registration Certificate) ಇದ್ದರೆ ಮಾತ್ರ ಹಿಂದೂ ವಿವಾಹವನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೌದು. ಹಿಂದೂ ವಿವಾಹಕ್ಕೆ ಕೇವಲ ಮದುವೆ ನೋಂದಣಿ ಪ್ರಮಾಣಪತ್ರ ಸಾಕಾಗುವುದಿಲ್ಲ. ಸಪ್ತಪದಿ ಸೇರಿದಂತೆ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದಾಗ ಮಾತ್ರ ವಿವಾಹ ಕಾನೂನುಬದ್ಧವಾಗಿ ಮಾನ್ಯವಾಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ರ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದೆ.
ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಗಳಿದ್ದರೂ, ಸಂಪ್ರದಾಯಬದ್ಧ ವಿವಾಹ ವಿಧಿವಿಧಾನಗಳು ವ್ಯಕ್ತಿಯ ಆಧ್ಯಾತ್ಮಿಕ ಅಸ್ತಿತ್ವವನ್ನು ಶುದ್ಧೀಕರಿಸಿ ಹೊಸ ಜೀವನಕ್ಕೆ ರೂಪಾಂತರಗೊಳಿಸುತ್ತವೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಯುನೈಟೆಡ್ ಕಿಂಗ್‌ಡಮ್ (UK)ನಲ್ಲಿ ವಾಸಿಸುತ್ತಿರುವ ಕೌಶಲ್ ಸೋನಾರ್ ಹಾಗೂ ಅಹಮದಾಬಾದ್ ಮೂಲದ ಮಹಿಳೆಯ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಜೂನ್ 23ರಂದು ಗುಜರಾತ್ ಹೈಕೋರ್ಟ್ ಈ ತೀರ್ಪು ನೀಡಿದೆ. ತನ್ನ ಅನುಮತಿಯಿಲ್ಲದೆ ವಂಚನೆಯ ಮೂಲಕ ವಿವಾಹ ದಾಖಲೆಗಳಿಗೆ ಸಹಿ ಪಡೆಯಲಾಗಿದೆ, ತಾವು ಎಂದಿಗೂ ದಾಂಪತ್ಯ ಜೀವನ ನಡೆಸಿಲ್ಲ ಹಾಗೂ ಯಾವುದೇ ಹಿಂದೂ ವಿವಾಹ ವಿಧಿವಿಧಾನಗಳು ನಡೆದಿಲ್ಲ ಎಂದು ಸೋನಾರ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದೇ ವಿಷಯವನ್ನು ಸಂಬಂಧಿತ ಮಹಿಳೆಯೂ ಕುಟುಂಬ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು. ಆದರೂ, ವಿವಾಹವನ್ನು ರದ್ದುಪಡಿಸಲು ಕುಟುಂಬ ನ್ಯಾಯಾಲಯ ನಿರಾಕರಿಸಿದ್ದನ್ನು ಹೈಕೋರ್ಟ್ ತಪ್ಪೆಂದು ಹೇಳಿದೆ. ಹಿಂದೂ ವಿವಾಹ ಕಾಯ್ದೆ – ಸೆಕ್ಷನ್ 7 ಹಿಂದೂ ವಿವಾಹವನ್ನು ಮಾನ್ಯ ಹಾಗೂ ಸಂಪೂರ್ಣ ಎಂದು ಪರಿಗಣಿಸಲು ಸಪ್ತಪದಿ ಸೇರಿದಂತೆ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳು ಕಡ್ಡಾಯ ಎಂದು ಹೇಳುವ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಅನ್ನು ಹೈಕೋರ್ಟ್ ಉಲ್ಲೇಖಿಸಿದೆ.
ಪವಿತ್ರ ಅಗ್ನಿಯನ್ನು ಸಾಕ್ಷಿಯಾಗಿ ವಧು-ವರರು ಏಳು ಹೆಜ್ಜೆ ಹಾಕಿದಾಗ ಮಾತ್ರ ಆ ವಿವಾಹಕ್ಕೆ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಕಾನೂನುಬದ್ಧ ಮಾನ್ಯತೆ ದೊರೆಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಈ ಮೂಲಭೂತ ಅಂಶವೇ ಇಲ್ಲದಿರುವುದರಿಂದ, ಕೇವಲ ನೋಂದಣಿಯಿಂದ ವಿವಾಹ ಮಾನ್ಯವಾಗುವುದಿಲ್ಲ ಎಂದು ತೀರ್ಪು ನೀಡಿದೆ. ಇದೇ ವೇಳೆ, “ಹಿಂದೂ ವಿವಾಹವು ಕೇವಲ ಹಾಡು-ನೃತ್ಯ, ಔತಣಕೂಟ ಅಥವಾ ಮನರಂಜನೆಗಾಗಿ ನಡೆಯುವ ಕಾರ್ಯಕ್ರಮವಲ್ಲ. ಅದು ಯಾವುದೇ ವಾಣಿಜ್ಯ ವ್ಯವಹಾರವೂ ಅಲ್ಲ. ಇದು ಒಬ್ಬ ಪುರುಷ ಮತ್ತು ಮಹಿಳೆ ಪವಿತ್ರ ಬಂಧಕ್ಕೆ ಪ್ರವೇಶಿಸಿ ಕುಟುಂಬ ನಿರ್ಮಿಸುವ ಗಂಭೀರ ಸಂಸ್ಕಾರವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಪತ್ನಿಯನ್ನು ಅರ್ಧಾಂಗಿನಿಯಾಗಿ ಪರಿಗಣಿಸಿ, ಆಕೆಗೆ ಸಮಾನ ಸ್ಥಾನಮಾನ ಮತ್ತು ಗೌರವ ನೀಡಲಾಗುತ್ತದೆ. ವಿವಾಹ ಬಂಧಕ್ಕೆ ಕಾಲಿಡುವ ಮುನ್ನ ಯುವಜನರು ಈ ಪವಿತ್ರ ವ್ಯವಸ್ಥೆಯ ಮಹತ್ವವನ್ನು ಅರಿತುಕೊಳ್ಳಬೇಕು” ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

