ಕಾರವಾರ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಂಕಾಳು ವೈದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಸತೀಶ್ ಸೈಲ್ ಅವರನ್ನು ಬಿಜೆಪಿಗೆ ಸೆಳೆಯಲು ಇಡಿ ಅಸ್ತ್ರ ಪ್ರಯೋಗಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಂಕಾಳು ವೈದ್ಯ, ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ದೇಶದ ಎಲ್ಲಾ ಭಾಗದಲ್ಲೂ ದಾಳಿ ನಡೆಸಲಾಗುತ್ತಿದೆ. ಇದು ಕೇಂದ್ರ ಬಿಜೆಪಿ ನಾಯಕರ ಷಡ್ಯಂತ್ರ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ ನಾಯಕರನ್ನು ತನ್ನತ್ತ ಸೆಳೆಯಲು ಬಿಜೆಪಿ ಇಂತಹ ದಾಳಿ ನಡೆಸುವ ಮೂಲಕ್ ಹೆದರಿಸುವ ಕೆಲಸ ಮಾಡುತ್ತಿದೆ ಎಂದರು.
ಕಾಂಗ್ರೆಸ್ ನಾಯಕರು, ಶಾಸಕರ ಮನೆ ಮೇಲೆ ಇಡಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿಗೆ ಹೋದರೆ ವಾಷಿಂಗ್ ಮಷಿನ್ ರೀತಿ ಕ್ಲೀನ್ ಆಗುತ್ತಾರೆ. ಬಿಜೆಪಿ ಶಾಸಕರು ಕಡಿಮೆ ಇದ್ದಿದ್ದಕ್ಕೆ ಈಗ ಇಂತಹ ದಾಳಿಗಳ ಮೂಲಕ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ ಶಾಸಕ ಸತೀಶ್ ಸೈಲ್ ಅವರನ್ನು ಬಿಜೆಪಿಗೆ ಸೆಳೆಯುವ ಯತ್ನವಾಗಿ ಇಡಿ ದಾಳಿ ನಡೆದಿದೆ ಎಂದು ಹೇಳಿದರು.
ಸತೀಶ್ ಸೈಲ್ ಮೊಬೈಲ್ ಸ್ವಿಚ್ ಆಫ್ ಮಾಡಿ ಎಲ್ಲೂ ಹೋಗಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗಿ ಬರಲಿ. ಸತೀಶ್ ಸೈಲ್ ಯಾವುದೇ ಅಕ್ರಮ ನಡೆಸಿಲ್ಲ. ಅವರಿಗೆ ಆರ್ಥಿಕ ಮೂಲಗಳಿವೆ. ರಾಜಕೀಯಕ್ಕೂ ಮೊದಲೇ 150 ಕೋಟಿ ತೆರಿಗೆ ಪಾವತಿಸಿದವರು. ಅನಗತ್ಯವಾಗಿ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿದರು.