ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯ ಕೊಲೆಗೆ ನಡೆದಿದ್ದ 25 ಲಕ್ಷ ರೂಪಾಯಿ ಸುಪಾರಿ ಸಂಚು ದೂರುದಾರ ಯುವಕನಿಂದಲೇ ಬಯಲಾಗಿರುವ ಘಟನೆ ನಡೆದಿದೆ.
ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು 25 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಮನಪರಿವರ್ತನೆಯಾಗಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಪ್ರಕರಣಕ್ಕೆ ತಿರುವು ನೋಡಿದ್ದಾನೆ.
ಅಭಿಷೇಕ್ ದೂರು ನೀಡಿದ ಯುವಕ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತೊಟ್ಟು ಕಾಶಿಪಟ್ಲ ನಿವಾಸಿ. ಅಭಿಷೇಕ್ನನ್ನು, 2025ರ ಮೇ ತಿಂಗಳಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಉಡುಪಿಯ ಸುದೀಪ್ ಎಂಬಾತ ಸಂಪರ್ಕಿಸಿದ್ದ. “ಒಬ್ಬ ಹಿಂದುವಿನ ಹತ್ಯೆಗೆ ಪ್ರತಿಯಾಗಿ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಲೇಬೇಕು” ಎಂದು ಪ್ರತೀಕಾರದ ಮಾತುಗಳನ್ನಾಡಿದ್ದ.
ನಾಲ್ಕು ತಿಂಗಳ ಹಿಂದೆ ಅಭಿಷೇಕ್ ಹಾಗೂ ಆತನ ಸ್ನೇಹಿತ ಕೀರ್ತನ್ನನ್ನು ಉಡುಪಿಗೆ ಕರೆಸಿಕೊಂಡ ಸುದೀಪ್, ಮಹೇಶ್ ಎಂಬಾತನನ್ನು ಪರಿಚಯಿಸಿ ಕೊಲೆ ಯೋಜನೆ ರೂಪಿಸಿದ್ದ. ಬಜ್ಪೆ ಕಿನ್ನಿಪದವಿನ ವ್ಯಕ್ತಿಯೊಬ್ಬರ ಫೋಟೋ ನೀಡಿ ಹತ್ಯೆ ಮಾಡಲು ಸೂಚಿಸಲಾಗಿತ್ತು. ಈ ಕೃತ್ಯ ಎಸಗಿದರೆ ಒಟ್ಟು 24 ರಿಂದ 25 ಲಕ್ಷ ರೂಪಾಯಿ ನೀಡುವುದಾಗಿಯೂ, ಜೈಲಿಗೆ ಹೋದರೆ ಕುಟುಂಬದ ನಿರ್ವಹಣೆಗೆ ಪ್ರತಿ ತಿಂಗಳು 15,000 ರೂ. ಹಣ ಮತ್ತು 5,000 ರೂ. ಮೌಲ್ಯದ ದಿನಸಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಕೊಲೆಗೆ ಎರಡು ತಲವಾರ್ಗಳನ್ನು ಸಹ ಸಿದ್ಧಪಡಿಸಿಕೊಂಡಿದ್ದಾಗಿ ದೂರುದಾರ ಅಭಿಷೇಕ್ ಪೊಲೀಸ್ ಕಂಪ್ಲೇಂಟ್ ನಲ್ಲಿ ಉಲ್ಲೇಖಿಸಿದ್ದಾನೆ.
ಇದೇ ವೇಳೆ ಅಭಿಷೇಕ್ ಪತ್ನಿ ಹೆರಿಗೆಯಾದ ಕಾರಣ ಆತನಿಗೆ ಮನಪರಿವರ್ತನೆಯಾಗಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಜೈಲು ಪಾಲಾಗಬೇಕಾಗುತ್ತದೆ ಎಂಬ ಭಯದಿಂದ ಕೃತ್ಯದಿಂದ ಹಿಂದೆ ಸರಿದ ಅಭಿಷೇಕ್, ವಾಟ್ಸಾಪ್ ಚಾಟ್ಗಳು, ಸ್ಕ್ರೀನ್ಶಾಟ್ಗಳು ಹಾಗೂ ಸಂಭಾಷಣೆಯ ಆಡಿಯೋ ಸಾಕ್ಷ್ಯಗಳೊಂದಿಗೆ ಪೊಲೀಸರ ಮುಂದೆ ಹಾಜರಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.
ಸದ್ಯ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ವಾಸ್ತವಾಂಶ ತಿಳಿಯಲು ತನಿಖೆ ಚುರುಕುಗೊಂಡಿದೆ.

