ಮಂಡ್ಯ: ಬೈಕ್ ನಲ್ಲಿ ಬಂದು ಮಹಿಳೆಯರ ಮಾಂಗಲ್ಯ ಸರ ಕದ್ದು ಪರಾರುಯಾಗುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರ ಮಾಂಗಲ್ಯ ಸರ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಮೈಸೂರಿನ ಶಾಂತಿನಗರ ನಿವಾಸಿ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ ಹಾಗೂ ರಾಜೀವ್ ನಗರದ ಸೈಯ್ಯದ್ ಅಯೂಬ್ ಎಂದು ಗುರುತಿಸಲಾಗಿದೆ. ಇಬ್ಬರೂ ಬೇರೆ ಬೇರೆ ಜಿಲ್ಲೆಗಳಲ್ಲಿ ಸರಗಳ್ಳತನ, ಮನೆಗಳ್ಳತನ ಮಾಡುತ್ತಿದ್ದರು.
ಬಂಧಿತರಿಂದ 253 ಗ್ರಾಂ ಚಿನ್ನ, 178ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಪಲ್ಸರ್ ಬೈಕ್, ಒಂದು ಆಕ್ಸಿಸ್ ಬೈಕ್ ಜಪ್ತಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕೇಗೌಡನದೊಡ್ದಿ ಗ್ರಾಮದ ಮಹದೇವ ಎಂಬುವವರ ಪತ್ನಿ ಸರಿತಾ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಖದೀಮರು 35 ಗ್ರಾಂ ತೂಕದ ಎರಡು ಎಳೆ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಸರಿತಾ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇಬ್ಬರು ಸರಗಳ್ಳರನ್ನು ಬಂಧಿಸಲಾಗಿದೆ.

