ಮಂಡ್ಯ: ಬಿಸಿಲ ಝಳಕ್ಕೆ ಹೈರಾಣಾಗಿದ್ದ ವಿದ್ಯಾರ್ಥಿಗಳು ಶಾಲೆಗೆ ರಜೆ ಇದ್ದಕಾರಣ ಕೆರೆಗೆ ಈಜಲು ಹೋಗಿ ದುರಂತಕ್ಕೀಡಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ದೊಡ್ಡಕೆರೆಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿಯನ್ನು ರಕ್ಷಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೇಶವ(11) ಮೃತ ವಿದ್ಯಾರ್ಥಿ. ಹೇಮಂತ್(12) ರಕ್ಷಣೆಗೊಳಗಾದ ವಿದ್ಯಾರ್ಥಿ. ಕೇಶವ ಮತ್ತು ಹೇಮಂತ್ ಮಳವಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಪರೀಕ್ಷೆ ಮುಗಿಸಿ ಕೆರೆಗೆ ಈಜಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

