ಮಂಡ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಘಟಕ ನಿರ್ಮಾಣ ಮಾಡುವ ವಿಚಾರ ಭಾರೀ ಜಟಾಪಟಿಗೆ ಕಾರಣವಾಗಿದೆ. ಮಂಡ್ಯ ಸಂಸದ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಘಟಕ ತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಭೂಮಿ ನೀಡುತ್ತಿಲ್ಲ ಎಂಬ ವಿಚಾರ ಚರ್ಚೆಗೆ ಕಾರಣವಾಗಿತ್ತು.
ಈಗ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರವನ್ನು ಬರೆದಿದ್ದು, ಮಂಡ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಘಟಕಕ್ಕೆ 100 ಎಕರೆ ಭೂಮಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಈ ಮೂಲಕ ಜಟಾಪಟಿ ಅಂತ್ಯಗೊಂಡಿದೆ.
ಎಂ.ಬಿ.ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ, ಮಂಡ್ಯ ಜಿಲ್ಲೆಯಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ 100 ಎಕರೆ ಭೂಮಿ ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಜೊತೆಗೆ ಅಗತ್ಯವಿರುವ ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಕ್ರಮದಿಂದ ಮಂಡ್ಯ ಜಿಲ್ಲೆಗೆ ನೂತನ ಹೂಡಿಕೆಗಳು ಹರಿದುಬಂದು, ಉದ್ಯೋಗಾವಕಾಶಗಳು ವಿಸ್ತರಿಸಲಿವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಆಹ್ವಾನಿಸುವ ಈ ಮಹತ್ವಾಕಾಂಕ್ಷೆಯ ಹೆಜ್ಜೆ, ಮುಂದಿನ ತಲೆಮಾರಿಗೂ ಭದ್ರ ಭವಿಷ್ಯವನ್ನು ಕಟ್ಟಿಕೊಡುವುದರ ಜೊತೆಗೆ ನಾಳಿನ ಹೊಸ ಕರ್ನಾಟಕ ನಿರ್ಮಾಣಕ್ಕೆ ದೃಢ ಅಡಿಪಾಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಜೆಡಿಎಸ್ ಆರೋಪ ಏನಾಗಿತ್ತು?: ಮಂಡ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಘಟಕಕ್ಕೆ ರಾಜ್ಯ ಸರ್ಕಾರ ಭೂಮಿ ನೀಡುತ್ತಿಲ್ಲ ಎಂಬುದು ಆರೋಪಕ್ಕೆ ಕಾರಣವಾಗಿತ್ತು. ಈ ಕುರಿತು ಶಾಸಕ ಪಿ.ರವಿಕುಮಾರ್ ಮಾತನಾಡಿದ್ದರು. ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಹ ಪೋಸ್ಟ್ ಹಾಕಲಾಗಿತ್ತು.
ಜೆಡಿಎಸ್ ಪಕ್ಷ, ‘ರಾಜ್ಯದ ಅಭಿವೃದ್ಧಿ ವಿಚಾರವಾಗಿ ಸದಾ ಅಡ್ಡಗಾಲು ಹಾಕುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ’ ಎಂದು ದೂರಿತ್ತು. ‘ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಸುಮಾರು 30 ರಿಂದ 40 ಸಾವಿರ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ, ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ನ ಕಂಪನಿಯು ಸೆಮಿ ಕಂಡಕ್ಟರ್ ಪ್ರಾಬ್ರಿಕೇಶನ್ ಘಟಕವನ್ನು ಮಂಡ್ಯಕ್ಕೆ ತರಲು ಪ್ರಯತ್ನಿಸಿದ್ದಾರೆ’ ಎಂದು ಹೇಳಿತ್ತು.
ಮಂಡ್ಯ ಜಿಲ್ಲೆಯ ಸುತ್ತಮುತ್ತ 100 ಎಕರೆ ಬಯಲು ಭೂಮಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ಕಂಪನಿಯು ಬೇಡಿಕೆ ಇಟ್ಟಿದ್ದು, ಈ ಸಂಬಂಧ ಕೇಂದ್ರ ಸಚಿವರು, ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರಿಗೆ ಪತ್ರ ಬರೆದು ಮನವಿ ಮಾಡಿದ್ದರೂ, ಕೈಗಾರಿಕೆಗೆ ಅಗತ್ಯ ಜಾಗ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿತ್ತು.
‘ಮಂಡ್ಯ ಕಾಂಗ್ರೆಸ್ ಶಾಸಕರೇ 500 ಎಕರೆ, 100 ಎಕರೆ ಜಾಗ ಕೊಡುತ್ತೇವೆ ಎಂದು ಮಾಧ್ಯಮದವರ ಮುಂದೆ ಬುರುಡೆ ಭಾಷಣ, ತರಲೆ ಮಾತನಾಡುವ ಮುನ್ನ ಕಾಂಗ್ರೆಸ್ ಸರ್ಕಾರ ಸದನದಲ್ಲೇ ಕೊಟ್ಟಿರುವ ಉತ್ತರವನ್ನು ಒಮ್ಮೆ ನೋಡಿ’ ಎಂದು ಶಾಸಕ ರವಿ ಕುಮಾರ್ ವಿರುದ್ಧವೂ ಟೀಕೆಗಳನ್ನು ಮಾಡಿತ್ತು.

