ಮಂಡ್ಯ : ನಗರದ ಮಸೀದಿ ಹೊರಗೆ ಹಲವು ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ವೃದ್ಧೆ ಮೃತಪಟ್ಟ ಬಳಿಕ, ಆಕೆಯ ಮನೆಯಲ್ಲಿ ಚೀಲಗಳಲ್ಲಿ ತುಂಬಿದ್ದ ನಗದು ಮತ್ತು ನಾಣ್ಯಗಳು ಪತ್ತೆಯಾಗಿದ್ದು, ಒಟ್ಟು ಮೊತ್ತ ₹30 ಲಕ್ಷಕ್ಕೂ ಅಧಿಕ ಎಂದು ತಿಳಿದುಬಂದಿದೆ.
ಹೌದು. ಮಂಡ್ಯ ನಗರದ ಗುಟ್ಟಲು ಬಡಾವಣೆಯ ನಿವಾಸಿಯಾಗಿದ್ದ ಹೂರ್ ಎಂಬ ವೃದ್ಧೆ ಹಲವು ವರ್ಷಗಳಿಂದ ಸ್ಥಳೀಯ ಮಸೀದಿ ಹೊರಗೆ ಭಿಕ್ಷೆ ಬೇಡುತ್ತಿದ್ದರು. ತಮ್ಮ ಕುಟುಂಬದವರು ತಮ್ಮನ್ನು ನೋಡಿಕೊಳ್ಳುತ್ತಿಲ್ಲ, ಜೀವನ ನಿರ್ವಹಣೆಗೆ ಭಿಕ್ಷೆ ಬೇಡುವುದೇ ಅನಿವಾರ್ಯವಾಗಿದೆ ಎಂದು ಅವರು ಹೇಳುತ್ತಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಹೂರ್ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂತ್ಯಕ್ರಿಯೆಯ ನಂತರ ಕೆಲವರು ಅವರ ಮನೆಗೆ ತೆರಳಿದಾಗ, ಅಲ್ಲಿ ಚೀಲಗಳಲ್ಲಿ ತುಂಬಿದ್ದ ಅಪಾರ ಪ್ರಮಾಣದ ನಗದು ಮತ್ತು ನಾಣ್ಯಗಳು ಪತ್ತೆಯಾಗಿವೆ.
ಸ್ಥಳೀಯ ನಿವಾಸಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಹಣದ ಪ್ರಮಾಣ ಕಂಡು ತಾವು ಆಘಾತಕ್ಕೊಳಗಾದೆವು ಎಂದು ತಿಳಿಸಿದ್ದಾರೆ. ಹಣವನ್ನು ಎಣಿಸಿದಾಗ ₹30 ಲಕ್ಷಕ್ಕೂ ಅಧಿಕವಾಗಿದ್ದು, ₹30ರಿಂದ ₹40 ಲಕ್ಷದವರೆಗೆ ಇರಬಹುದು ಎಂದು ಅವರು ಹೇಳಿದ್ದಾರೆ.
ಹೂರ್ ಹಲವು ವರ್ಷಗಳಿಂದ ಮಸೀದಿ ಹೊರಗೆ ಭಿಕ್ಷೆ ಬೇಡುತ್ತಿದ್ದ ಹಿನ್ನೆಲೆಯಲ್ಲಿ, ಪತ್ತೆಯಾದ ಹಣವನ್ನು ಮಸೀದಿಗೆ ದೇಣಿಗೆಯಾಗಿ ನೀಡಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ. ಆದರೆ ಮಸೀದಿ ಸಮಿತಿ ಈ ಹಣವನ್ನು ಸ್ವೀಕರಿಸಲು ನಿರಾಕರಿಸಿದೆ ಎನ್ನಲಾಗಿದೆ. ಭಿಕ್ಷೆಯಿಂದ ಸಂಗ್ರಹಿಸಿದ ಹಣವನ್ನು ಸ್ವೀಕರಿಸಲು ತಮಗೆ ಇಷ್ಟವಿಲ್ಲ ಎಂದು ಸಮಿತಿ ತಿಳಿಸಿದೆ.
ಹೂರ್‌ಗೆ ಇಬ್ಬರು ಸಹೋದರರಿದ್ದರು ಎನ್ನಲಾಗಿದ್ದು, ಅವರಲ್ಲಿ ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ಒಬ್ಬರು ಕೂಡ ಹಣದ ಪಾಲನ್ನು ಪಡೆಯಲು ನಿರಾಕರಿಸಿದ್ದಾರೆ. ಬಳಿಕ ಮತ್ತೊಬ್ಬ ಸಹೋದರ ಕುಟುಂಬ ಸಮೇತ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರು ಮತ್ತು ಸಂಬಂಧಿಕರೊಂದಿಗೆ ಚರ್ಚೆ ನಡೆಸಿದ ನಂತರ ಹಣವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಹೂರ್ ಬದುಕಿದ್ದಾಗ ತಮ್ಮನ್ನು ಕುಟುಂಬದವರು ನೋಡಿಕೊಳ್ಳುತ್ತಿಲ್ಲ ಎಂದು ದೂರುತ್ತಿದ್ದರು. ಆದರೆ ಅವರ ಸಾವಿನ ಬಳಿಕ ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಘಟನೆ ಮಂಡ್ಯ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಆಕ್ಷೇಪಣೆ ದಾಖಲಾಗದ ಹಿನ್ನೆಲೆಯಲ್ಲಿ ಪೊಲೀಸರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ ಎಂದು ತಿಳಿದುಬಂದಿದೆ.

