HomeLatest Newsಕಾರ್ ಇಲ್ಲ, ಫ್ಲಾಟ್ ಇಲ್ಲ, ₹25 ಸಾವಿರ ಸಂಬಳ: ಮದುವೆಗೆ ವಧು ಬೇಕೆಂದು ರಸ್ತೆ ಮಧ್ಯೆ...

ಕಾರ್ ಇಲ್ಲ, ಫ್ಲಾಟ್ ಇಲ್ಲ, ₹25 ಸಾವಿರ ಸಂಬಳ: ಮದುವೆಗೆ ವಧು ಬೇಕೆಂದು ರಸ್ತೆ ಮಧ್ಯೆ ಬ್ಯಾನರ್ ಹಾಕಿದ ಯುವಕನ ಕಥೆ ವೈರಲ್

ಪುಣೆ: ಇಂದಿನ ದಿನಗಳಲ್ಲಿ ತಮಗೆ ಬೇಕಾದ ಸೂಕ್ತ ಜೀವನ ಸಂಗಾತಿಯನ್ನು (Life Partner) ಹುಡುಕುವುದು ವಧು-ವರರಿಬ್ಬರಿಗೂ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮ್ಯಾಟ್ರಿಮೋನಿಯಲ್ ಸೈಟ್‌ಗಳು, ಬ್ರೋಕರ್‌ಗಳ ಹಿಂದೆ ಬಿದ್ದು ಸುಸ್ತಾದವರೇ ಹೆಚ್ಚು. ಆದರೆ ಇಲ್ಲೊಬ್ಬ ಯುವಕ ತನಗೆ ತಕ್ಕ ವಧುವನ್ನು ಹುಡುಕಲು ಇಡೀ ಊರಿಗೇ ಕಾಣುವಂತೆ ರಸ್ತೆ ಮಧ್ಯೆ ಬೃಹತ್ ಬ್ಯಾನರ್ ಹಾಕುವ ಮೂಲಕ ದೇಶಾದ್ಯಂತ ಭಾರಿ ಸುದ್ದಿಯಾಗಿದ್ದಾನೆ

ಮಹಾರಾಷ್ಟ್ರದ ಪುಣೆಯ ಪಿಂಪಲ್ ಸೌದಾಗರ್‌ನ ಅತ್ಯಂತ ಜನನಿಬಿಡ ಜಂಕ್ಷನ್‌ನಲ್ಲಿ ಅಳವಡಿಸಲಾಗಿರುವ ಈ ಬೃಹತ್ ಬಿಲ್‌ಬೋರ್ಡ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral News) ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ.

“ಫ್ಲಾಟ್ ಇಲ್ಲ, ಕಾರೂ ಇಲ್ಲ” ಬ್ಯಾನರ್‌ನಲ್ಲಿದೆ ಪ್ರಾಮಾಣಿಕ ಬಯೋಡೇಟಾ

ಸಾಮಾನ್ಯವಾಗಿ ಮದುವೆ ಮಾರುಕಟ್ಟೆಯಲ್ಲಿ ಹುಡುಗರು ತಮ್ಮ ಸಂಬಳ, ಆಸ್ತಿ-ಅಂತಸ್ತನ್ನು ಕೊಂಚ ಹೆಚ್ಚಿಸಿಯೇ ಹೇಳಿಕೊಳ್ಳುವುದು ರೂಢಿ. ಆದರೆ ಈ ಬ್ಯಾನರ್ ಹಾಕಿರುವ 30 ವರ್ಷದ ರಾಘವ್ ವಿಶ್ವಾಸರಾವ್ ಶಿಂದೆ ಎಂಬ ಯುವಕ ಮಾತ್ರ ಜಗತ್ತೇ ಬೆರಗಾಗುವಂತೆ ತನ್ನ ವಾಸ್ತವವನ್ನು ಬಿಚ್ಚಿಟ್ಟಿದ್ದಾನೆ.

ಬ್ಯಾನರ್‌ನಲ್ಲಿ ಆತ ಪ್ರದರ್ಶಿಸಿರುವ ಮಾಹಿತಿ ಹೀಗಿದೆ:

ವರನ ಹೆಸರು: ರಾಘವ್ ವಿಶ್ವಾಸರಾವ್ ಶಿಂದೆ

ವಯಸ್ಸು: 30 ವರ್ಷ

ಮಾಸಿಕ ಸಂಬಳ: ಕೇವಲ 25,000 ರೂಪಾಯಿ

ಆಸ್ತಿ ವಿವರ: ಸ್ವಂತ ಕಾರು ಇಲ್ಲ, ಫ್ಲಾಟ್ ಇಲ್ಲ, ಅತ್ತ ಕೃಷಿ ಭೂಮಿಯೂ ಇಲ್ಲ

ನಿಮಗೆ ಯಾರಾದರೂ ಇಂತಹ ಸೂಕ್ತ ವಧು ತಿಳಿದಿದ್ದರೆ ದಯವಿಟ್ಟು ತಿಳಿಸಿ ಎಂದು ಬ್ಯಾನರ್‌ನ ಕೊನೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

ಕಾಲೆಳೆದ ನೆಟ್ಟಿಗರು: ಎಲ್ಲಾ ಓಕೆ, ಆದ್ರೆ ನಂಬರ್ ಎಲ್ಲಿ ಮಾರಾಯಾ?

ಇಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಶ್ರೀಮಂತ ಹಾಗೂ ಸೆಟಲ್ಡ್ ಆಗಿರುವ ಯುವಕರನ್ನೇ ಮದುವೆಯಾಗಲು ಇಷ್ಟಪಡುವ ಟ್ರೆಂಡ್ ನಡುವೆ, ಈ ಯುವಕ ಒಂದಿಷ್ಟೂ ಮುಚ್ಚುಮರೆ ಇಲ್ಲದೆ ತನ್ನ ಪರಿಸ್ಥಿತಿಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿರುವುದಕ್ಕೆ ನೆಟ್ಟಿಗರು ಫುಲ್ ಮಾರ್ಕ್ಸ್ ನೀಡಿದ್ದಾರೆ.

ಇದೇ ವೇಳೆ ಈ ವೈರಲ್ ಪೋಸ್ಟ್‌ಗೆ ನೆಟ್ಟಿಗರು ಭರ್ಜರಿ ಹಾಸ್ಯಮಯ ಕಮೆಂಟ್‌ಗಳ ಮೂಲಕ ಕಾಲೆಳೆಯುತ್ತಿದ್ದಾರೆ:

ಒಬ್ಬ ಬಳಕೆದಾರರು, “ಯುವಕ ಎಲ್ಲಾ ಮಾಹಿತಿಯನ್ನಂತೂ ಪ್ರಾಮಾಣಿಕವಾಗಿ ಹಾಕಿದ್ದಾನೆ, ಆದರೆ ತನ್ನನ್ನು ಸಂಪರ್ಕಿಸಲು ಫೋನ್ ನಂಬರ್ ಹಾಕೋದನ್ನೇ ಮರೆತುಬಿಟ್ಟಿದ್ದಾನೆ” ಎಂದು ತಮಾಷೆ ಮಾಡಿದ್ದಾರೆ.

ಮತ್ತೊಬ್ಬರು, “ಸ್ವಂತ ಕಾರು, ಫ್ಲಾಟ್ ಇಲ್ಲದೇ ಇರಬಹುದು. ಆದರೆ ಇಷ್ಟು ದೊಡ್ಡ ಹೈವೇ ಬ್ಯಾನರ್ ಹಾಕಲು ಈತ ಗ್ಯಾರಂಟಿ ತನ್ನ ಒಂದು ತಿಂಗಳ ಸಂಬಳವನ್ನೇ ಖರ್ಚು ಮಾಡಿರಬೇಕು ಸೂಕ್ತ ವಧು ಸಿಗಲಿ ಬಿಡಿ” ಎಂದು ಹಾರೈಸಿದ್ದಾರೆ.

ರಸ್ತೆ ಮಧ್ಯೆ ರಾರಾಜಿಸುತ್ತಿರುವ ಈ ವಿಲಕ್ಷಣ ಬ್ಯಾನರ್‌ನ ವಿಡಿಯೋಗಳು ಸದ್ಯ ಇನ್‌ಸ್ಟಾಗ್ರಾಮ್ (Instagram) ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಚಂಡಮಾರುತ ಎಬ್ಬಿಸಿವೆ. ವಿಡಿಯೋ ನೋಡಿದ ತಕ್ಷಣ ನೆಟ್ಟಿಗರು ತಮ್ಮ ಮದುವೆಯಾಗದ ಒಂಟಿ (Single) ಸ್ನೇಹಿತರನ್ನು ಸಾಲು ಸಾಲಾಗಿ ಟ್ಯಾಗ್ ಮಾಡಲು ಶುರು ಮಾಡಿದ್ದಾರೆ. ನಿನಗೂ ಹೆಣ್ಣು ಸಿಗದಿದ್ದರೆ ಇದೇ ಐಡಿಯಾ ಮಾಡು ಎಂದು ಕಾಮೆಂಟ್ ಮಾಡುವ ಮೂಲಕ ಈ ವಿನೂತನ ಮದುವೆ ಪ್ರಸ್ತಾಪವನ್ನು ನೆಟ್ಟಿಗರು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.

ಇಂಟರ್ನೆಟ್‌ನಲ್ಲಿ ಹರಿದು ಬರುತ್ತಿರುವ ಪ್ರಮುಖ ಹಾಗೂ ತಮಾಷೆಯ ಕಮೆಂಟ್‌ಗಳು ಹೀಗಿವೆ:

ಒಬ್ಬ ಬಳಕೆದಾರರು ತಮಾಷೆ ಮಾಡುತ್ತಾ, “ನನಗೂ ಮದುವೆಗೆ ಹೆಣ್ಣು ಸಿಗುತ್ತಿಲ್ಲ, ನಾನೂ ನನ್ನ ಏರಿಯಾದಲ್ಲೊಂದು ಇಂತಹದೇ ದೊಡ್ಡ ಸೈನ್ ಬೋರ್ಡ್ ಹಾಕಿಕೊಳ್ಳುವ ಆಲೋಚನೆ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ಯುವಕನ ಮರೆಗುಳಿತನವನ್ನು ರೇಗಿಸುತ್ತಾ, “ಇಷ್ಟೆಲ್ಲಾ ಬರೆದ ಮಹಾಶಯ ತನಗೆ ಕರಾವಳಿ ಹುಡುಗಿ ಬೇಕೋ ಅಥವಾ ಸ್ಥಳೀಯ ಹುಡುಗಿ ಬೇಕೋ ಎನ್ನುವುದರ ಜೊತೆಗೆ ತನ್ನ ಫೋನ್ ನಂಬರ್ ಹಾಕುವುದನ್ನೇ ಮರೆತಿದ್ದಾನೆ. ಈಗ ಹೆಣ್ಣಿನ ಕಡೆಯವರು ಈತನನ್ನು ಸಂಪರ್ಕಿಸುವುದಾದರೂ ಹೇಗೆ?” ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ವ್ಯಂಗ್ಯವಾಡುತ್ತಾ, “ಮದುವೆ ಬ್ರೋಕರ್ ಅಥವಾ ಮ್ಯಾಟ್ರಿಮೋನಿಯಲ್ ಬ್ಯೂರೋಗೆ ಹೋಗಿ ನೋಂದಣಿ ಮಾಡಿಕೊಳ್ಳುವ ಬದಲು, ಹೈವೇ ಜಂಕ್ಷನ್‌ನಲ್ಲಿ ಬ್ಯಾನರ್ ಹಾಕಿ ನಿಂತಿರುವುದು ನೋಡಿದರೆ ತಮಾಷೆಯಾಗಿದೆ” ಎಂದಿದ್ದಾರೆ.

ಇನ್ನು ಕೆಲವು ಜನ ಇದು ನಿಜವಾದ ಮದುವೆ ಪ್ರಸ್ತಾಪವೋ ಅಥವಾ ಯಾವುದಾದರೂ ಹೊಸ ಬ್ರ್ಯಾಂಡ್‌ನ ಪ್ರಚಾರದ ಗಿಮಿಕ್ (Marketing Gimmick) ಇರಬಹುದೇ ಎಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ, ರಾಘವ್ ಶಿಂದೆಯ ಈ ವಿಭಿನ್ನ ಮದುವೆ ಪ್ರಚಾರ ಮಾತ್ರ ಸದ್ಯ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿರುವುದಂತೂ ಸುಳ್ಳಲ್ಲ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular