HomeKarnataka6 ರೂ. ಬಿಎಂಟಿಸಿ ಟಿಕೆಟ್‌ಗೆ 60,000 ಪೇ ಮಾಡಿದ ವ್ಯಕ್ತಿ, ಮುಂದೇನು?

6 ರೂ. ಬಿಎಂಟಿಸಿ ಟಿಕೆಟ್‌ಗೆ 60,000 ಪೇ ಮಾಡಿದ ವ್ಯಕ್ತಿ, ಮುಂದೇನು?

ಯುಪಿಐ ಮೂಲಕ ಹಣ ಪಾವತಿ ಮಾಡುವಾಗ ಆಗಾಗ ಯಡವಟ್ಟು ಆಗುತ್ತದೆ. ಇಂತಹ ಘಟನೆ ಈಗ ಬಿಎಂಟಿಸಿ ಬಸ್‌ನಲ್ಲಿ ನಡೆದಿದೆ. ಪ್ರಯಾಣಿಕರೊಬ್ಬರು 6 ರೂ. ಟಿಕೆಟ್‌ಗಾಗಿ 60,000 ರೂ. ಯುಪಿಐ ಮೂಲಕ ಪಾವತಿ ಮಾಡಿದ್ದಾರೆ.

ಜನವರಿ 14ರಂದು ಬನಶಂಕರಿ-ಕದಿರೇನಹಳ್ಳಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಏರಿದ್ದ ವ್ಯಕ್ತಿ 6 ರೂ. ಟಿಕೆಟ್ ಪಡೆಯಲು ಯುಪಿಐ ಮೂಲಕ ಹಣ ಪಾವತಿ ಮಾಡುತ್ತೇನೆ ಎಂದು ಹೇಳಿದ್ದ.

ಇದಕ್ಕೆ ಕಂಡಕ್ಟರ್ ಸಹ ಒಪ್ಪಿಗೆ ನೀಡಿ, 6 ರೂ. ಟಿಕೆಟ್ ನೀಡಿದರು. ಆದರೆ ಪ್ರಯಾಣಿಕ ಪೋನ್ ಪೇ ಮೂಲಕ ಹಣ ಪಾವತಿ ಮಾಡುವಾಗ 60,000 ರೂ. ಪಾವತಿ ಮಾಡಿದ್ದಾನೆ. ತಕ್ಷಣ ಬಸ್‌ನಲ್ಲಿ ಇದ್ದ ಇತರ ಪ್ರಯಾಣಿಕರು ಗಾಬರಿಯಾದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚು ಹಣ ಹೋಗಿರುವ ಕುರಿತು ಪ್ರಯಾಣಿಕರ ಕಂಡಕ್ಟರ್‌ಗೆ ಮಾಹಿತಿ ನೀಡಿದ. ಪರಿಶೀಲನೆ ನಡೆಸಿದಾಗ 6 ರೂ. ಟಿಕೆಟ್‌ಗೆ ಆತ 62,316 ರೂ. ಪಾವತಿ ಮಾಡಿದ್ದ. ಈಗ ಘಟನೆ ವಿವರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚು ಹಣ ಪಾವತಿ ಮುಂದೇನು?: 62 ಸಾವಿರ ರೂ. ಹಣ ನೋಡಿ ಕಂಡಕ್ಟರ್ ಬೆಚ್ಚಿ ಬಿದ್ದಿದ್ದಾನೆ. ಈ ವಿಚಾರವನ್ನು ನಿರ್ವಾಹಕ ತಕ್ಷಣ ಮೇಲಾಧಿಕಾರಿಗಳಿಗೆ ತಿಳಿಸಿ ಪ್ರಯಾಣಿಕನ ಮೊಬೈಲ್ ಸಂಖ್ಯೆಯನ್ನು ಅವರಿಗೆ ನೀಡಿದ್ದಾರೆ.

ಅಧಿಕಾರಿಗಳು ಖಾತೆಯನ್ನು ಪರಿಶೀಲನೆ ನಡೆಸಿದಾಗ 62,316 ರೂ. ಪಾವತಿಯಾಗಿರುವುದು ಖಚಿತವಾಗಿದೆ. ತಕ್ಷಣ ಅವರು ಹಣವನ್ನು ಮರಳಿ ಪಡೆಯಲು ಡಿಪೋಗೆ ಬನ್ನಿ ಎಂದು ಪ್ರಯಾಣಿಕರಿಗೆ ಅಭಯ ನೀಡಿದರು.

ಆದರೆ ಇನ್ನೂ ಕೂಡ ಹಣ ಮರು ಪಾವತಿಯಾಗಿಲ್ಲ. ಅಧಿಕಾರಿಗಳ ಮಾಹಿತಿ ಪ್ರಕಾರ ಈ ಕುರಿತು ಪ್ರಕ್ರಿಯೆ ಆರಂಭಿಸಲಾಗಿದೆ. ಎರಡು ದಿನದಲ್ಲಿ ಹಣ ಪ್ರಯಾಣಿಕನ ಖಾತೆಗೆ ವಾಪಸ್ ಆಗಲಿದೆ.

ಬಸ್ ಹತ್ತುವ, ಇಳಿಯುವ ಗಡಿಬಿಡಿ, ಮೊಬೈಲ್‌ ಕರೆಯಲ್ಲಿ ಬ್ಯುಸಿ, ಕೆಲಸದ ಒತ್ತಡದ ಕಾರಣ ಅನೇಕ ಬಾರಿ ತಪ್ಪಾಗಿ ಯುಪಿಐ ಮೂಲಕ ಹಣ ಸಂದಾಯ ಮಾಡುವುದು ಇದೆ. ಆದರೆ ಈ ಪ್ರಯಾಣಿಕ ಯಾವ ಗಮನದಲ್ಲಿ 6 ರೂ. ಟಿಕೆಟ್‌ಗಾಗಿ 62,316 ರೂ. ಪಾವತಿ ಮಾಡಿದ ಎಂಬುದು ಪ್ರಶ್ನೆಯಾಗಿದೆ.

ಬಿಎಂಟಿಸಿ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಉಳಿದ ಹಣವನ್ನು ವಾಪಸ್ ನೀಡುವ ಭರವಸೆ ಕೊಟ್ಟಿದ್ದಾರೆ. ಹೆಚ್ಚು ಹಣ ಪಾವತಿ ಮಾಡಿದ ಪ್ರಯಾಣಿಕ ಈಗ ಹಣ ಯಾವಾಗ ಬರುತ್ತದೆ? ಎಂದು ಕಾಯುವಂತಾಗಿದೆ.

ಹಲವು ಬಾರಿ ಮೊಬೈಲ್ ನಂಬರ್‌ಗಳಿಗೆ ಹಣ ಸಂದಾಯ ಮಾಡುವಾಗ ತಪ್ಪು ಅಂಕಿ ಒತ್ತಿ ಹಣ ಬೇರೆ ಯಾರಿಗೋ ವರ್ಗಾವಣೆ ಆಗುತ್ತದೆ. ಯುಪಿಐ ಪಾವತಿ, ಫೋನ್ ನಂಬರ್‌ಗೆ ಹಣ ಕಳಿಸುವಾಗ ಹುಷಾರಾಗಿ ಇರಿ ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಯುಪಿಐ ಪಾವತಿ ಮೂಲಕ ಹಣ ಕಳುಹಿಸುವ ಮೊದಲು ನಮೂದು ಮಾಡಿರುವ ಹಣದ ಮೌಲ್ಯ ಸರಿಯಾಗಿದೆಯೇ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಅವಸರದಲ್ಲಿ ಹಣ ಪಾವತಿ ಮಾಡಲು ಹೋಗಬೇಡಿ.

ಈಗ ಬಿಎಂಟಿಸಿ ಬಸ್‌ಗಳಲ್ಲಿ ಯುಪಿಐ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಚಿಲ್ಲರೆಯ ಬಡಿದಾಟಕ್ಕೆ ಬ್ರೇಕ್ ಬಿದ್ದಿದೆ. ಆದರೆ ಹೀಗೆ ಟಿಕೆಟ್ ಪಡೆಯುವಾಗಲೇ ಹೆಚ್ಚಿನ ಮೊತ್ತದ ಹಣ ಸಂದಾಯವಾಗಿದೆ.

ಕಳೆದ ವಾರ ಬಿಎಂಟಿಸಿ ಬಸ್‌ನಲ್ಲಿರುವ ಕ್ಯೂಆರ್ ಕೋಡ್ ಬದಲು ತಮ್ಮ ವೈಯಕ್ತಿಕ ಖಾತೆ ಕ್ಯೂಆರ್ ಕೋಡ್ ನೀಡಿ, ಪ್ರಯಾಣಿಕರ ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದ ಮೂವರು ನಿರ್ವಾಹಕರನ್ನು ಅಮಾನತು ಮಾಡಿತ್ತು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular