ಟೆಕ್ಸಾಸ್ ನಗರದಲ್ಲಿ ವಿದೇಶಿಗರ ಅತಿಯಾದ ವಲಸೆಯ ವಿರುದ್ಧ ಸಿಡಿದೆದ್ದ ಸ್ಥಳೀಯರು ರಸ್ತೆಗಿಳಿದು ಪ್ರತಿಭಟಿಸಿದ್ದು, ಬೇರೆ ದೇಶಗಳಿಂದ ತಮ್ಮ ದೇಶಕ್ಕೆ ವಲಸೆ ಬರುವವರ ರಾಷ್ಟ್ರೀಯತೆ ಹಾಗೂ ಧರ್ಮದ ಹೆಸರುಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ದಕ್ಷಿಣ ಅಮೆರಿಕಾದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಟೆಕ್ಸಾಸ್ ಹಾಗೂ ಸುತ್ತಲಿನ ನಗರಗಳಿಗೆ ಅತಿಯಾಗಿ ಭಾರತದ ಹಿಂದೂಗಳು ಹಾಗೂ ಮುಸ್ಲಿಮರು ಆಗಮಿಸುತ್ತಿದ್ದು, ಇದು ಸ್ಥಳೀಯ ಕ್ರೈಸ್ತರ ಹಾಗೂ ಬಿಳಿ ಜನರ ಆಸ್ಮಿತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರತಿಭಟನೆಯ ಹಲವು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಎಲಿಜಾ ಶಾಫರ್ ಎಂಬ ವ್ಯಕ್ತಿ ಭಾರತೀಯರನ್ನು ಕೆರಳಿಸುವಂತಹ ವಿಡಿಯೊವೊಂದನ್ನು ಹಂಚಿಕೊಂಡಟಿದ್ದಾರೆ. ಈ ವಿಡಿಯೊದಲ್ಲಿ ಕ್ಲೇಟಾನ್ ವಾಕರ್ ಎಂಬ ವ್ಯಕ್ತಿ ಕೈನಲ್ಲಿ ಸಿಗರೇಟ್ ಹಿಡಿದು ಫ್ರಿಸ್ಕೊ ಸಿಟಿ ಹಾಲ್ ಮುಂಭಾಗ ನಿಂತು ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿದ್ದಾನೆ. ಹೀಗೆ ಆತ ಭಾರತದ ಧ್ವಜವನ್ನು ಹರಿದುಹಾಕುತ್ತಿದ್ದರೆ, ನೆರೆದಿದ್ದ ಇತರೆ ಪ್ರತಿಭಟನಾಕಾರರು ಭಾರತದ ವಿರುದ್ಧ ಅತಿಕೆಟ್ಟ ಪದ ಬಳಕೆ ಮಾಡಿ ಘೋಷಣೆ ಕೂಗಿದ್ದಾರೆ.
ಸದ್ಯ ಈ ವಿಡಿಯೊ ಎಕ್ಸ್ ಖಾತೆಯಲ್ಲಿ ಇಪ್ಪತ್ತು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಭಾರೀ ವೈರಲ್ ಆಗಿದೆ. ಪ್ರತಿಭಟನೆ ವಲಸಿಗರ ವಿರುದ್ಧ ಇರಬೇಕೇ ಹೊರತು ಅನ್ಯ ದೇಶದ ಧ್ವಜದ ಮೇಲೆ ಆ ದ್ವೇಷವನ್ನು ತೋರಿಸಬಾರದು ಎಂದು ಹಲವರು ಕಾಮೆಂಟ್ ಮಾಡಿದ್ದರೆ, ಅಮೆರಿಕನ್ನರ ಪೈಕಿ ಬಹುತೇಕರು ವ್ಯಕ್ತಿಯ ಆ ನಡೆಯನ್ನು ಕೊಂಡಾಡಿದ್ದಾರೆ.

