ಬೆಂಗಳೂರು: ನಗರದ ನಮ್ಮ ಮೆಟ್ರೋ ಹಳದಿ ಮಾರ್ಗದ (Yellow Line) ಹುಸ್ಕೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದ ದುರ್ಘಟನೆಯಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಸುಮಾರು 5.50 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸ ಪಟ್ಟರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಸುಮಾರು 30-35 ವರ್ಷದ ವ್ಯಕ್ತಿಯೊಬ್ಬರು ಏಕಾಏಕಿ ಮೆಟ್ರೋ ಟ್ರ್ಯಾಕ್‌ಗೆ ಹಾರಿದ್ದಾರೆ. ತಕ್ಷಣ ಎಚ್ಚೆತ್ತ ಬಿಎಂಆರ್‌ಸಿಎಲ್ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಸುರಕ್ಷತಾ ದೃಷ್ಟಿಯಿಂದ ಟ್ರ್ಯಾಕ್ಷನ್ ಪವರ್‌ನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನ ನಡೆಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹೆಬ್ಬುಗೋಡಿ ಪೊಲೀಸರಿಂದ ತನಿಖೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಬ್ಬುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಗುರುತು ಪತ್ತೆ ಹಾಗೂ ಆತ್ಮಹತ್ಯೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ
ಘಟನೆಯ ಪರಿಣಾಮವಾಗಿ ಯೆಲ್ಲೋ ಲೈನ್‌ನಲ್ಲಿ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಪ್ರಸ್ತುತ ಎಲೆಕ್ಟ್ರಾನಿಕ್ ಸಿಟಿಯಿಂದ ಆರ್.ವಿ. ರೋಡ್‌ವರೆಗೆ ಮಾತ್ರ ಮೆಟ್ರೋ ಸಂಚಾರ ನಡೆಸಲಾಗಿದ್ದು, ಉಳಿದ ಭಾಗದಲ್ಲಿ ಸೇವೆ ಸ್ಥಗಿತಗೊಳಿಸಲಾಗಿತ್ತು. ನಂತರ ಸಾಮಾನ್ಯ ಸೇವೆ ಪುನರಾರಂಭಿಸಲು ಬಿಎಂಆರ್‌ಸಿಎಲ್ ಕ್ರಮ ಕೈಗೊಂಡಿದೆ.
ಮೆಟ್ರೋ ದರ ಏರಿಕೆ ಚರ್ಚೆ ನಡುವೆ ಘಟನೆ
ಇದೇ ವೇಳೆ, ನಮ್ಮ ಮೆಟ್ರೋ ಪ್ರಯಾಣ ದರ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ. ಮೆಟ್ರೋ ಹಂತ–3ಎ (Phase 3A) ಯೋಜನೆಗಾಗಿ ಸಿದ್ಧಪಡಿಸಿರುವ ಪರಿಷ್ಕೃತ ಸಮಗ್ರ ಯೋಜನಾ ವರದಿ (DPR)ಯಲ್ಲಿ ಮುಂದಿನ ವರ್ಷಗಳಲ್ಲಿ ಪ್ರಯಾಣ ದರ ಪರಿಷ್ಕರಣೆಗೆ ಹೊಸ ಸೂತ್ರವನ್ನು ಪ್ರಸ್ತಾಪಿಸಲಾಗಿದೆ. ಈ ಬೆಳವಣಿಗೆ ಪ್ರಯಾಣಿಕರ ಗಮನ ಸೆಳೆದಿದೆ.

