ಬೆಳಗಾವಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ನಂತರ ತಾನು ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
28 ವರ್ಷದ ಮಹಿಳೆ ಕೊಲೆಗೈದ ಬಳಿಕ ಆನಂದರಾಜು ಸುತಾರ(30) ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅನೈತಿಕ ಸಂಬಂಧವೇ ಕೊಲೆಗೆ ಕಾರಣವೆಂಬ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆನಂದನಿಗೂ ಮದುವೆಯಾಗಿ ಮೂವರು ಮಕ್ಕಳಿದ್ದು, ಆತನ ಪತ್ನಿ ಗರ್ಭಿಣಿಯಾಗಿದ್ದಾರೆ. ಆನಂದ ಮತ್ತು ಮಹಿಳೆಯ ನಡುವೆ ವಿವಾಹೇತರ ಸಂಬಂಧವಿತ್ತು ಎಂದು ಹೇಳಲಾಗಿದೆ.
ಮೃತ ಮಹಿಳೆಯ ಗಂಡನಿಗೆ ಅಕ್ರಮ ಸಂಬಂಧ ವಿಚಾರ ಗೊತ್ತಾಗಿ ಮನೆಯಲ್ಲಿ ಗಲಾಟೆಯಾಗಿತ್ತು. ನಂದಗಡ ಪೊಲೀಸ್ ಠಾಣೆಯಲ್ಲಿ ಆನಂದ್ ವಿರುದ್ಧ ಮಹಿಳೆಯ ಪತಿ ದೂರು ನೀಡಿದ್ದರು. ಠಾಣೆಗೆ ಕರೆಸಿದ್ದ ಪೊಲೀಸರು ಆನಂದನಿಗೆ ಮಹಿಳೆಯ ಸಹವಾಸಕ್ಕೆ ಹೋಗದಂತೆ, ಅಕ್ರಮ ಸಂಬಂಧ ಮುಂದುವರೆಸಿದಂತೆ ಬುದ್ಧಿವಾದ ಹೇಳಿದ್ದರು.
ಇದರಿಂದ ಆಕ್ರೋಶಗೊಂಡ ಆನಂದ ಗುರುವಾರ ರಾತ್ರಿ ಮಹಿಳೆಯ ಗಂಡ ಇಲ್ಲದ ವೇಳೆ ಹಿಂಬಾಗಿಲಿನಿಂದ ಮನೆಗೆ ನುಗ್ಗಿ ಎದೆ, ಹೊಟ್ಟೆ, ಬೆನ್ನು ಸೇರಿ ಸಿಕ್ಕಸಿಕ್ಕಲ್ಲಿ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಅದೇ ಚಾಕುವಿನಿಂದ ತಾನೂ ಚುಚ್ಚಿಕೊಂಡಿದ್ದಾನೆ. ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಆನಂದ ಸಾವನ್ನಪ್ಪಿದ್ದಾನೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.