ಬಲಿಗುಡ: ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಅತ್ತೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಕೆ. ನುವಾಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ತಿಗುಡ ಪಂಚಾಯತ್ ವ್ಯಾಪ್ತಿಯ ಕುಡುಪಾಕಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಪೇಟಿ ಮಲ್ಲಿಕ್ ಎಂದು ಗುರುತಿಸಲಾಗಿದ್ದು, ಸೂರತ್ ಪ್ರಧಾನ್ ಆರೋಪಿಯಾಗಿದ್ದಾನೆ.
ಆರೋಪಿ ಮತ್ತು ಆತನ ಪತ್ನಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಶೀಘ್ರದಲ್ಲೇ ಅದು ವಿಕೋಪಕ್ಕೆ ತಿರುಗಿ ಪತಿ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಕೋಪಗೊಂಡು ಕೊಡಲಿಯನ್ನು ತೆಗೆದುಕೊಂಡು ಆಕೆಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆದರೆ, ಅಷ್ಟರಲ್ಲಿ ಆತನ ಅತ್ತೆ ಮಧ್ಯಪ್ರವೇಶಿಸಿ ಮಗಳನ್ನು ರಕ್ಷಿಸಲು ಮುಂದಾದಾಗ ಆ ವ್ಯಕ್ತಿ ಕೊಡಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಆಕೆಗೆ ಗಂಭೀರ ಗಾಯಗಳಾಗಿವೆ. ಆಕೆಯ ಕುಟುಂಬ ಸದಸ್ಯರು ಆಕೆಯನ್ನು ತಕ್ಷಣ ಬಾಲಿಗುಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಆಕೆಯನ್ನು ಫುಲ್ಬಾನಿಯಲ್ಲಿರುವ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆನ್ನಲಾಗಿದೆ. ಮಾಹಿತಿ ಪಡೆದ ನಂತರ, ಕೆ ನುವಾಗಾಂವ್ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಅಪರಾಧ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

