ಇಂದು ( ಮೇ 4 ) ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಪುದುಚೆರಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಎಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಕುತೂಹಲ ಮೂಡಿದೆ.
ಇನ್ನು ಈ ಪೈಕಿ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮತ ಎಣಿಕೆ ಕಾರ್ಯ ಆರಂಭವಾಗವುದಕ್ಕೂ ಮುನ್ನ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿ ಟ್ವೀಟ್ ಮಾಡಿದ್ದಾರೆ.
ಮತಪೆಟ್ಟಿಗೆಗಳನ್ನು ಇಟ್ಟಿರುವ ವಿವಿಧ ಸ್ಟ್ರಾಂಗ್‌ರೂಮ್‌ಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಸಿಸಿಟಿವಿಗಳನ್ನು ಆಫ್ ಮಾಡಲಾಗುತ್ತಿದ್ದು, ಸ್ಟ್ರಾಂಗ್ ರೂಮ್ ಒಳಗೆ ವಾಹನಗಳು ಹೋಗಿಬರುತ್ತಿವೆ ಎಂಬ ಅತಿ ಗಂಭೀರ ಆರೋಪಗಳನ್ನು ಮಾಡಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ರಾತ್ರಿಯಿಡೀ ಎಚ್ಚರವಿರಿ ಎಲ್ಲವನ್ನೂ ಗಮನಿಸಿ ಎಂದು ಕರೆ ನೀಡಿದ್ದಾರೆ.
ಮಧ್ಯರಾತ್ರಿ 1.12ಕ್ಕೆ ದೀದಿ ಮಾಡಿರುವ ಟ್ವೀಟ್ ಹೀಗಿದೆ: “ಜಾಗರೂಕರಾಗಿರಿ, ಕಣ್ಣಿಡಿ, ರಾತ್ರಿಯಿಡೀ ಎಚ್ಚರವಿರಿ. ದೂರುಗಳನ್ನು ಸಲ್ಲಿಸಿ. ವಿವಿಧ ಸ್ಥಳಗಳಿಂದ ನನಗೆ ವರದಿಗಳು ಬರುತ್ತಿದ್ದು, ಲೋಡ್‌ಶೆಡ್ಡಿಂಗ್ ಅನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ ಎಂಬ ಮಾಹಿತಿ ಬರುತ್ತಿದೆ. ಹೂಘ್ಲಿಯ ಸೆರಂಪೂರ್, ನಾದಿಯಾದ ಕೃಷ್ಣನಗರ, ಬರ್ಡ್ವಾನ್‌ನ ಆಸ್ಗ್ರಾಮ್ ಹಾಗೂ ಕೊಲ್ಕತ್ತಾದ ಕ್ಷುದಿರಾಮ್ ಅನುಶೀಲನ್ ಕೇಂದ್ರದವರೆಗೆ, ಹಂತ ಹಂತವಾಗಿ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ, ಸಿಸಿಟಿವಿಗಳನ್ನು ಆಫ್ ಮಾಡಲಾಗುತ್ತಿದೆ, ಮತ್ತು ಸ್ಟ್ರಾಂಗ್ ರೂಮ್‌ಗಳಿಗೆ ವಾಹನಗಳು ಒಳಹೋಗಿ ಹೊರಬರುತ್ತಿವೆ ಎಂಬ ಘಟನೆಗಳು ಬೆಳಕಿಗೆ ಬಂದಿವೆ. ನನ್ನ ಪಕ್ಷದ ಕಾರ್ಯಕರ್ತರಿಗೆ ಎಲ್ಲವನ್ನು ಗಮನದಲ್ಲಿಟ್ಟುಕೊಳ್ಳಲು ರಾತ್ರಿ ಪೂರ್ತಿ ಎಚ್ಚರಿಕೆಯಿಂದ ಇದ್ದು, ಸ್ಟ್ರಾಂಗ್ ರೂಮ್‌ಗಳಲ್ಲಿರುವ ಜನರ ಮತಗಳನ್ನು ಕಾಪಾಡಿ. ಎಲ್ಲಿಯಾದರೂ ಸಂಶಯಾಸ್ಪದ ಪರಿಸ್ಥಿತಿ ಕಂಡುಬಂದರೆ, ಅವರನ್ನು ಸುತ್ತುವರಿದು, ತಕ್ಷಣ ದೂರುಗಳನ್ನು ಸಲ್ಲಿಸಿ ಮತ್ತು ಸಿಸಿಟಿವಿ ದೃಶ್ಯಗಳನ್ನು ಕೇಳಿ ಎಂದು ಕರೆ ನೀಡುತ್ತಿದ್ದೇನೆ. ಇವೆಲ್ಲವೂ ಬಿಜೆಪಿ ಸೂಚನೆಯ ಮೇರೆಗೆ ನಡೆಯುತ್ತಿದೆ” ಎಂದು ಮಮತಾ ಬ್ಯಾನರ್ಜಿ ಬರೆದುಕೊಂಡಿದ್ದಾರೆ.

