ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಮಲ್ಲಮ್ಮ ಅವರ ಮೆಂಟರ್ ಆಗಿದ್ದ ಪಲ್ಲವಿ ಅವರ ಹಠಾತ್ ನಿಧನ ಹಲವರಿಗೆ ಆಘಾತ ತಂದಿದೆ. ಪಲ್ಲವಿ ಅವರಿಗೆ ಏನಾಗಿತ್ತು ಎಂಬ ಪ್ರಶ್ನೆ ಕೂಡ ಮೂಡಿತ್ತು. ಮಲ್ಲಮ್ಮ ಹೇಳುವ ಪ್ರಕಾರ, ಪಲ್ಲವಿ ಅವರು ಸಾವಿಗೂ ಕೆಲ ದಿನಗಳ ಮೊದಲು ಎಂದಿನಂತೆಯೇ ಕೆಲಸ ಮಾಡುತ್ತಿದ್ದರು. ಬೊಟಿಕ್ಗೆ ಬಂದಿದ್ದ ಅವರು ಮದುವೆ ಸಮಾರಂಭಗಳಿಗೆ ಬೇಕಾದ ಬಟ್ಟೆಗಳ ಆರ್ಡರ್ಗಳನ್ನು ಕೂಡ ತೆಗೆದುಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಅವರಿಗೆ ಚಳಿ ಹಾಗೂ ಜ್ವರ ಕಾಣಿಸಿಕೊಂಡಿದೆ.
ಮೇಡಂ ನನಗೆ ಚಳಿ ಜ್ವರ ಬಂದ ಹಾಗೆ ಆಗುತ್ತಿದೆ. ಆಸ್ಪತ್ರೆಗೆ ಹೋಗಿ ಬರೋಣ ಎಂದು ಹೇಳಿದರು. ನಂತರ ಇಬ್ಬರೂ ಆಸ್ಪತ್ರೆಗೆ ಹೋದೆವು” ಎಂದು ಮಲ್ಲಮ್ಮ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಡೆಂಗ್ಯೂ ಜ್ವರ ಇರುವುದು ಗೊತ್ತಾಗಿದೆ. ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇರುವುದರಿಂದ ದೊಡ್ಡ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಪಲ್ಲವಿ ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿದ್ದಾಗ ಪಲ್ಲವಿ ಅವರ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಕಾಣಿಸಿರಲಿಲ್ಲ ಎಂದು ಮಲ್ಲಮ್ಮ ಹೇಳಿದ್ದಾರೆ. “ಅವರು ಚೆನ್ನಾಗಿಯೇ ಇದ್ದರು. ಹಾಗಾಗಿ ನನಗೆ ಕೆಲಸ ಇದ್ದ ಕಾರಣ ಮನೆಗೆ ಬಂದಿದ್ದೆ” ಎಂದು ತಿಳಿಸಿದ್ದಾರೆ.
ಆದರೆ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಆಸ್ಪತ್ರೆಗೆ ಕರೆ ಬಂದಿದೆ. ಪಲ್ಲವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಕೂಡಲೇ ಆಸ್ಪತ್ರೆಗೆ ಬರುವಂತೆ ತಿಳಿಸಲಾಗಿತ್ತು.
“ನಾವು ಆತುರವಾಗಿ ಆಸ್ಪತ್ರೆಗೆ ಹೋದೆವು. ಆದರೆ ಅಷ್ಟರಲ್ಲಾಗಲೇ ಮೇಡಂ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು” ಎಂದು ಮಲ್ಲಮ್ಮ ಕಣ್ಣೀರಿಟ್ಟಿದ್ದಾರೆ.
ಮಲ್ಲಮ್ಮ ಜೀವನದಲ್ಲಿ ಪಲ್ಲವಿ ಅವರ ಪಾತ್ರ
ಪಲ್ಲವಿ ಅವರ ಬಗ್ಗೆ ಮಾತನಾಡುವಾಗ ಮಲ್ಲಮ್ಮ ಭಾವುಕರಾಗಿದ್ದಾರೆ. ತಮ್ಮನ್ನು ಗುರುತಿಸಿ, ಪ್ರೋತ್ಸಾಹಿಸಿ ಬಿಗ್ ಬಾಸ್ ವೇದಿಕೆಗೆ ಕಳುಹಿಸಿದ್ದೇ ಪಲ್ಲವಿ ಎಂದು ಅವರು ಹೇಳಿದ್ದಾರೆ.“ನಾನು ಎಲ್ಲೋ ಒಂದು ಮೂಲೆಯಲ್ಲಿದ್ದವಳು. ನನ್ನನ್ನು ಗುರುತಿಸಿ ಪ್ರೋತ್ಸಾಹಿಸಿ ಬಿಗ್ ಬಾಸ್ನಂತಹ ದೊಡ್ಡ ವೇದಿಕೆಗೆ ಕಳುಹಿಸಿಕೊಟ್ಟವರು ಪಲ್ಲವಿ ಮೇಡಂ. ಇಂದು ನನ್ನನ್ನು ಎಲ್ಲರಿಗೂ ಪರಿಚಯಿಸಿದ ಶ್ರೇಯಸ್ಸು ಅವರದ್ದು” ಎಂದು ಮಲ್ಲಮ್ಮ ಹೇಳಿದ್ದಾರೆ.“ನನ್ನ ಬೆಳವಣಿಗೆಯ ಹಿಂದೆ ಇದ್ದ ಬೆಳಕನ್ನೇ ಕಳೆದುಕೊಂಡಿದ್ದೇನೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಮಲ್ಲಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

