HomeKarnataka'ದಸರಾ ಹಬ್ಬ’ಕ್ಕೆ ರೈಲು ಪ್ರಯಾಣಿಕರಿಗೆ ಮೋದಿ ಸರ್ಕಾರದಿಂದ ಆಧುನಿಕ LHB ಬೋಗಿಗಳ ಕೊಡುಗೆ: ಸಂಸದ ಬಿ.ವೈ....

‘ದಸರಾ ಹಬ್ಬ’ಕ್ಕೆ ರೈಲು ಪ್ರಯಾಣಿಕರಿಗೆ ಮೋದಿ ಸರ್ಕಾರದಿಂದ ಆಧುನಿಕ LHB ಬೋಗಿಗಳ ಕೊಡುಗೆ: ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಶಿವಮೊಗ್ಗ-ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಉತ್ತಮ ಪ್ರಯಾಣಾನುಭವ ಒದಗಿಸುವ ನಿಟ್ಟಿನಲ್ಲಿ, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ರೈಲುಗಳೂ ಸೇರಿದಂತೆ ನೈರುತ್ಯ ರೈಲ್ವೆಯ ಆರು ರೈಲುಗಳಲ್ಲಿ(ಪರಸ್ಪರ ಮೂಲ ನಿಲ್ದಾಣ ಮತ್ತು ಗಮ್ಯನಿಲ್ದಾಣಗಳ ನಡುವೆ) ಹಳೆಯ ಬೋಗಿಗಳ ಬದಲಿಗೆ ಆಧುನಿಕ ಎಲ್‌.ಎಚ್‌.ಬಿ(ಲಿಂಕ್-ಹಾಫ್‌ಮನ್-ಬುಷ್) ಬೋಗಿಗಳನ್ನು ಅಳವಡಿಸುವ ರೈಲ್ವೆ ಇಲಾಖೆ ನಿರ್ಧಾರ ಸ್ವಾಗತಾರ್ಹ ಮತ್ತು ಸಂತಸದ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

“ದೇಶದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಿಸುವುದರ ಜೊತೆಗೆ ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಸೇವೆಗಳನ್ನು ಒದಗಿಸಲು ಕೇಂದ್ರದ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಸರ್ಕಾರ ನಿರಂತರವಾಗಿ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ. ಇದರಿಂದ ನಮ್ಮ ಶಿವಮೊಗ್ಗ ಜಿಲ್ಲೆಯ ನಾಗರಿಕರಿಗೂ ಉತ್ತಮ ಪ್ರಯಾಣಿಕ ಸೌಲಭ್ಯ ಮತ್ತು ಸವಲತ್ತುಗಳು ಲಭ್ಯವಾಗುತ್ತಿವೆ. ನವರಾತ್ರಿ ಹಾಗೂ ನಾಡಹಬ್ಬ ದಸರೆಯ ಸಂದರ್ಭದಲ್ಲಿ ಈ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಸೇವೆ ನಮ್ಮ ಜಿಲ್ಲೆಗೆ ಲಭ್ಯವಾಗುತ್ತಿರುವುದು ದಸರಾ ಹಬ್ಬದ ಕೊಡುಗೆ ಎಂದೇ ನಾನು ಭಾವಿಸುತ್ತೇನೆ. ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಲಭ್ಯಗಳ ಸುಧಾರಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಕಾರ, ನೆರವುಗಳು ಇದೇ ರೀತಿ ಮುಂದುವರಿಯುವ ವಿಶ್ವಾಸವಿದೆ ಎಂದಿದ್ದಾರೆ.

ಆಧುನಿಕ ಎಲ್‌.ಎಚ್‌.ಬಿ ಬೋಗಿಗಳು: ನೈರುತ್ಯ ರೈಲ್ವೆಯ ಅಧಿಕೃತ ಆದೇಶದ ಪ್ರಕಾರ, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ಅಕ್ಟೋಬರ್ 20ರಿಂದ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ರೈಲಿನಲ್ಲಿ ಅಕ್ಟೋಬರ್ 21ರಿಂದ ಹೊಸ ಬೋಗಿಗಳ ಅಳವಡಿಕೆ ಜಾರಿಗೆ ಬರಲಿದೆ. ಎಲ್‌.ಎಚ್‌.ಬಿ ಬೋಗಿಗಳು ಆಧುನಿಕ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಪ್ರಯಾಣಾನುಭವಕ್ಕೆ ಹೆಸರುವಾಸಿಯಾಗಿವೆ. ಹಳೆಯ ಬೋಗಿಗಳ ಬದಲಿಗೆ ಇಂತಹ ಆಧುನಿಕ ಬೋಗಿಗಳನ್ನು ಅಳವಡಿಸುವುದರಿಂದ ಶಿವಮೊಗ್ಗ–ಮಲೆನಾಡು ಭಾಗದ ಜನರಿಗೆ ರೈಲು ಪ್ರಯಾಣದ ಗುಣಮಟ್ಟ ಸುಧಾರಿಸಲಿದೆ. ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆಗಳ ಜೊತೆಗೆ, ಆಯಾ ರೈಲುಗಳಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಒಟ್ಟು ಸ್ಥಾನಗಳ ಸಂಖ್ಯೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಸುಧಾರಣೆಯಿಂದ ಬೆಂಗಳೂರಿಗೆ ಸಂಚರಿಸುವ ಮಲೆನಾಡಿನ ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಉತ್ತಮ ರೈಲು ಪ್ರಯಾಣದ ಅನುಭವ ಒದಗಿಸಲು ಸಹಕಾರಿಯಾಗಲಿವೆ ಎಂದು ಸಂಸದರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗ ದಸರಾ ಉದ್ಘಾಟಿಸಿದ ನಟ ಶ್ರೀನಾಥ್: ವಂದೇ ಮಾತರಂ ಪೂರ್ಣ ಗೀತೆ ಗಾಯನಕ್ಕೆ ಆಕ್ಷೇಪಿಸಿ ವೇದಿಕೆಯಿಂದ ನಿರ್ಗಮಿಸಿದ ಕಾಂಗ್ರೆಸ್ ನಾಯಕರು

ಶಿವಮೊಗ್ಗ: ಶಿವಮೊಗ್ಗ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡಿದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ವೇದಿಕೆಯಿಂದ ಹೊರನಡೆದಿದ್ದಾರೆ.

ಈ ಘಟನೆಯಿಂದ ರಾಜ್ಯದಲ್ಲಿ ಈಗಾಗಲೇ ಚರ್ಚೆಯಲ್ಲಿರುವ ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.

ನಾಡಹಬ್ಬದ ಸಾಂಸ್ಕೃತಿಕ ಸಂಭ್ರಮದ ನಡುವೆ ನಡೆದ ಈ ಬೆಳವಣಿಗೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎಷ್ಟು ಚರಣಗಳನ್ನು ಹಾಡಬೇಕು ಎಂಬ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ವಿವಾದಕ್ಕೆ ಕಾರಣವೇನು?

ಕರ್ನಾಟಕ ಸರ್ಕಾರವು 2026ರ ಸೆಪ್ಟೆಂಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಬಹುತೇಕ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಸೂಚಿಸಲಾಗಿದೆ.

ಆದರೆ ಶಿವಮೊಗ್ಗ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೀತೆಯನ್ನು ಪೂರ್ಣವಾಗಿ ಹಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್ ನೇತೃತ್ವದಲ್ಲಿ ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್, ಜವಳಿ ನಿಗಮ ಅಧ್ಯಕ್ಷ ಕೆ. ಚೇತನ್, ನಾಗರಾಜ್ ಕಂಕಾರಿ, ಹೆಚ್. ಪಾಲಾಕ್ಷಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ವೇದಿಕೆಯಿಂದ ನಿರ್ಗಮಿಸಿದ್ದಾರೆ. ಇದು ರಾಜ್ಯ ಸರ್ಕಾರದ ಕಾರ್ಯಕ್ರಮ. ಇಲ್ಲಿ ರಾಜ್ಯ ಸರ್ಕಾರದ ಆದೇಶ ಪಾಲಿಸದೇ ವಂದೇ ಮಾತರಂ ಗೀತೆ ಪೂರ್ಣ ಹಾಡಲು ಅವಕಾಶ ನೀಡಿದ ಪಾಲಿಕೆ ಆಯುಕ್ತರನ್ನು ವಜಾಗೊಳಿಸಬೇಕು ಎಂದು ಯೋಗೀಶ್ ಒತ್ತಾಯಿಸಿದ್ದಾರೆ.

ಹಿರಿಯ ನಟ ಶ್ರೀನಾಥ್ ಶಿವಮೊಗ್ಗ ದಸರಾ ಉದ್ಘಾಟಿಸಿದರು. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ ಮೊದಲಾದವರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular