ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕೇವಲ 23 ದಿನಗಳಲ್ಲಿ ಬರೋಬ್ಬರಿ 2.33 ಕೋಟಿ ರೂ ಹಣ ಸಂಗ್ರಹವಾಗಿದೆ.
ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಸರಣಿ ರಜಾ ದಿನಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಮಲೈ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದು, ಮಾದಪ್ಪನಿಗೆ ಒಟ್ಟು ಕೋಟಿ ಕೋಟಿ ರೂಪಾಯಿ ಕಾಣಿಕೆ ಹಾಕಿದ್ದಾರೆ.
ಕಳೆದ 23 ದಿನಗಳ ಅವಧಿಯಲ್ಲಿ ಮಾದಪ್ಪನ ಹುಂಡಿಯಲ್ಲಿ ಬರೋಬ್ಬರಿ 2.33 ಕೋಟಿ ರೂಪಾಯಿ ನಗದು ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅವರ ಸಮ್ಮುಖದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪಾರದರ್ಶಕವಾಗಿ ಹುಂಡಿ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಸಂಗ್ರಹವಾದ ಒಟ್ಟು ಕಾಣಿಕೆ ವಿವರ
ನಗದು: 2,33,84,201 ರೂ.
ಚಿನ್ನ: 21 ಗ್ರಾಂ
ಬೆಳ್ಳಿ: 800 ಗ್ರಾಂ
ಡಿಜಿಟಲ್ ಪಾವತಿ 5,78,897 ರೂ.
ಇನ್ನೊಂದು ವಿಶೇಷ ಎಂದರೆ ಚಲಾವಣೆ ರದ್ದಾಗಿರುವ 2000 ರೂ. ಮುಖಬೆಲೆಯ 3 ನೋಟುಗಳು ಹಾಗೂ 4 ವಿದೇಶಿ ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.

