ಬೆಂಗಳೂರು: ಚಳಿಗಾಲದ ಮೈಕೊರೆಯುವ ಚಳಿಗೆ ಬ್ರೇಕ್ ಹಾಕಿ, ಬೆಚ್ಚಗಿನ ಸೂರ್ಯನ ಕಿರಣಗಳನ್ನು ಸ್ವಾಗತಿಸುವ ಸುಂದರ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ (Makar Sankranti) ಹೊಸ್ತಿಲಲ್ಲಿದೆ. ಸೂರ್ಯನು ದಕ್ಷಿಣದಿಂದ ಉತ್ತರ ಪಥಕ್ಕೆ ಚಲಿಸುವ ಉತ್ತರಾಯಣದ ಪುಣ್ಯಕಾಲ ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಹಬ್ಬದ ಕಳೆ ಮನೆಮಾಡುತ್ತದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ, ರೈತಬಾಂದವರ ಪಾಲಿಗೆ ಈ ಹಬ್ಬ ಹೊಸ ಬದುಕು ಮತ್ತು ಸಂತೋಷದ ಸಂಕೇತ.
ಸಂಕ್ರಾಂತಿ ಎಂದರೆ ಕೇವಲ ಎಳ್ಳು-ಬೆಲ್ಲ ತಿನ್ನುವುದಷ್ಟೇ ಅಲ್ಲ; ಇದು ಕತ್ತಲೆಯಿಂದ ಬೆಳಕಿನತ್ತ, ಶೀತದಿಂದ ಶಕ್ತಿಯತ್ತ ಸಾಗುವ ಸಂಕೇತ. ಸೂರ್ಯದೇವನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸುವ ಈ ದಿನ, ಹೊಸ ಬೆಳೆ ಕೈಗೆ ಬಂದು ರೈತನ ಮನೆ ಧಾನ್ಯಗಳಿಂದ ತುಂಬಿರುತ್ತದೆ. ಆಕಾಶದಲ್ಲಿ ಹಾರುವ ರಂಗುರಂಗಿನ ಗಾಳಿಪಟಗಳು ನಮ್ಮ ಮನಸ್ಸಿನ ಆಸೆಗಳಿಗೆ ರೆಕ್ಕೆ ನೀಡುತ್ತವೆ.
ನಮ್ಮ ನಾಡಿನ ಬಯಲು ಸೀಮೆಯಲ್ಲಿ ಈ ಹಬ್ಬವನ್ನು ಮೂರು ದಿನಗಳ ಕಾಲ ವೈಭವದಿಂದ ಆಚರಿಸಲಾಗುತ್ತದೆ:
ಭೋಗಿ: ಹಳೆಯದನ್ನೆಲ್ಲಾ ಕಳೆದು ಹೊಸ ಬೆಳೆಯನ್ನು ಪೂಜಿಸುವ ದಿನ.
ಸಂಕ್ರಾಂತಿ (ಸಂಕ್ರಮಣ): ಎಳ್ಳು-ಬೆಲ್ಲ ವಿನಿಮಯ ಮಾಡಿ ಪ್ರೀತಿ ಹಂಚುವ ಮತ್ತು ಸೂರ್ಯನ ಆರಾಧನೆಯ ದಿನ.
ಕಣುಮ (ಕರಿ): ಕೃಷಿಗೆ ಆಧಾರವಾದ ಜಾನುವಾರುಗಳನ್ನು ಪೂಜಿಸಿ ಕಿಚ್ಚು ಹಾಯಿಸುವ ಸಡಗರದ ದಿನ.
2026 ರ ಸಂಕ್ರಾಂತಿ ಯಾವಾಗ? ಇಲ್ಲಿದೆ ಮುಹೂರ್ತದ ಮಾಹಿತಿ
ಪಂಚಾಂಗದ ಪ್ರಕಾರ ಜನವರಿ 14, 2026 ರಂದು ಸೂರ್ಯನು ಮಕರ ರಾಶಿಗೆ ಪಾದಾರ್ಪಣೆ ಮಾಡಲಿದ್ದಾನೆ. ಈ ದಿನದ ಪುಣ್ಯಕಾಲದ ವಿವರಗಳು ಹೀಗಿವೆ:
ಮಕರ ಸಂಕ್ರಾಂತಿ ಪುಣ್ಯಕಾಲ: ಮಧ್ಯಾಹ್ನ 3:13 ರಿಂದ ಸಾಯಂಕಾಲ 5:45 ರವರೆಗೆ (ಒಟ್ಟು ಅವಧಿ: 2 ಗಂಟೆ 32 ನಿಮಿಷ).
ಮಹಾ ಪುಣ್ಯಕಾಲ: ಮಧ್ಯಾಹ್ನ 3:13 ರಿಂದ ಸಾಯಂಕಾಲ 4:58 ರವರೆಗೆ (ಒಟ್ಟು ಅವಧಿ: 1 ಗಂಟೆ 45 ನಿಮಿಷ).
ಮಕರ ಸಂಕ್ರಾಂತಿಯ ಮಹತ್ವ
ಮಕರ ಸಂಕ್ರಾಂತಿ ಬಂತೆಂದರೆ ಅದು ದೇವತೆಗಳ ಹಗಲು ಅಂದರೆ ಉತ್ತರಾಯಣದ ಆರಂಭ. ಶಾಸ್ತ್ರಗಳ ಪ್ರಕಾರ, ಈ ಸಮಯ ಆಧ್ಯಾತ್ಮಿಕ ಪ್ರಗತಿಗೆ ಪರ್ವಕಾಲ. ಇದಕ್ಕೆ ಸಾಕ್ಷಿ ಎಂಬಂತೆ, ಮಹಾಭಾರತದ ಭೀಷ್ಮ ಪಿತಾಮಹರು ಕೂಡ ಮೋಕ್ಷಕ್ಕಾಗಿ ಇದೇ ಉತ್ತರಾಯಣದವರೆಗೆ ಕಾಯುತ್ತಿದ್ದರು ಹಾಗಾಗಿಯೇ ಈ ದಿನ ಮಾಡುವ ಗಂಗಾ ಸ್ನಾನ ಮತ್ತು ದಾನ-ಧರ್ಮಗಳು ಜನ್ಮ ಜನ್ಮಾಂತರದ ಪಾಪಗಳನ್ನು ತೊಳೆದು, ಅಕ್ಷಯ ಪುಣ್ಯವನ್ನು ನೀಡುತ್ತವೆ ಎಂಬ ಬಲವಾದ ನಂಬಿಕೆಯಿದೆ.
2026ರ ಸಂಕ್ರಾಂತಿಯ ವಿಶೇಷವೇನು?
ಸೂರ್ಯ-ವಿಷ್ಣು ಮಿಲನ ಈ ಬಾರಿಯ ಸಂಕ್ರಾಂತಿ ಮತ್ತಷ್ಟು ವಿಶೇಷವಾಗಲು ಕಾರಣ, ಹಬ್ಬದ ಜೊತೆಗೇ ಬಂದಿರುವ ಷಟ್ಟಿಲ ಏಕಾದಶಿ. ಹೌದು, ಜನವರಿ 14ರಂದು ಸೂರ್ಯನ ಆರಾಧನೆಯ ಜೊತೆಗೆ ಶ್ರೀಹರಿ ವಿಷ್ಣುವನ್ನು ಪೂಜಿಸುವ ಸುವರ್ಣ ಅವಕಾಶ ಲಭಿಸಿದೆ. ಈ ಅಪರೂಪದ ಯೋಗದಲ್ಲಿ ದಾನ ಮಾಡುವುದು ನೂರು ಪಟ್ಟು ಹೆಚ್ಚಿನ ಫಲ ನೀಡುತ್ತದೆ. ಆದರೆ ನೆನಪಿಡಿ, ಈ ದಿನ ಏಕಾದಶಿ ಇರುವುದರಿಂದ ಭಕ್ತರು ಅನ್ನ ಸೇವನೆಯನ್ನು ತಪ್ಪಿಸಿ ಉಪವಾಸವಿದ್ದು ಪೂಜೆ ಮಾಡುವುದು ಅತ್ಯಂತ ಶುಭದಾಯಕ.
ಖಗೋಳ ಮತ್ತು ಆಧ್ಯಾತ್ಮದ ಮ್ಯಾಜಿಕ್:
ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ಖಗೋಳ ವಿಜ್ಞಾನದ ದೃಷ್ಟಿಯಿಂದಲೂ ಈ ದಿನಕ್ಕೆ ಹೆಚ್ಚಿನ ತೂಕವಿದೆ. ಸೂರ್ಯನು ಮಕರ ರಾಶಿಗೆ ಮರಳುತ್ತಿದ್ದಂತೆ ಭೂಮಿಯ ಮೇಲೆ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ದೇವತೆಗಳು ತಮ್ಮ ನಿದ್ರೆಯಿಂದ ಎಚ್ಚರಗೊಂಡು ಭೂಮಿಯನ್ನು ಸಮೃದ್ಧಿಯಿಂದ ಹರಸುವ ಈ ಕಾಲದಲ್ಲಿ, ಉತ್ತಮ ಆರೋಗ್ಯ ಮತ್ತು ಸಂಪತ್ತಿಗಾಗಿ ಸೂರ್ಯದೇವನಿಗೆ ಧನ್ಯವಾದ ಅರ್ಪಿಸುವುದು ನಮ್ಮ ಸಂಪ್ರದಾಯ

