ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‌ಎಸ್) ರಾಜ್ಯ ಸರ್ಕಾರಿ ನೌಕರರಿಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬಂದಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆಯನ್ನು ನಿರ್ವಹಣೆ ಮಾಡಲಾಗುತ್ತಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೋಂದಾಯಿತ ಆಸ್ಪತ್ರೆಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡುವ ಕುರಿತು ಸುತ್ತೋಲೆಯಲ್ಲಿ ವಿವರಣೆ ನೀಡಲಾಗಿದೆ.
ಈ ಸುತ್ತೋಲೆಯು ನೋಂದಾಯಿತ ಆಸ್ಪತ್ರೆಗಳು KASS ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ಆದೇಶ 15/06/2020, 30 23/09/2025 ಉಲ್ಲೇಖಿಸಲಾಗಿದೆ.
ಸುತ್ತೋಲೆಯ ವಿವರ: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಸರ್ಕಾರದಿಂದ ಕರ್ನಾಟಕ ಆರೋಗ್ಯ, ಸಂಜೀವಿನಿ ಯೋಜನೆಯು ದಿನಾಂಕ 01.10.2025 ರಿಂದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಮುಖಾಂತರ ಅನುಷ್ಠಾನಗೊಂಡಿರುತ್ತದೆ.
ಅದರಂತೆ ಇದುವರವಿಗೂ ಫಲಾನುಭವಿಗಳಿಗೆ ಯೋಜನೆಯಡಿಯಲ್ಲಿ ಚಿಕಿತ್ಸೆ ದೊರೆಯುತ್ತಿದ್ದು, ಕೆಲ ಪ್ರಸಂಗಗಳಲ್ಲಿ ಚಿಕಿತ್ಸೆ ನಿರಾಕರಣೆ ಮತ್ತು ಸರಿಯಾದ ಮಾಹಿತಿ ಕೊರತೆಯ ಬಗ್ಗೆ ಫಲಾನುಭವಿಗಳು ತಿಳಿಸಿರುತ್ತಾರೆ. ಆದಕಾರಣ, KASS ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳು ಈ ಕೆಳಕಂಡಂತ ಕಾರ್ಯ ನಿರ್ವಹಿಸಲು ಸೂಚಿಸಿದೆ.
- ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ನೋಂದಾಯಿತಗೊಂಡಿರುವ ಕೆಲವು ಆಸ್ಪತ್ರೆಗಳು ಪ್ಯಾಕೇಜ್ ದರಗಳು ಹೆಚ್ಚಾಗಿರುವ ತಜ್ಞತೆಗಳಿಗೆ (Speciality) ಮಾತ್ರ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿರುತ್ತದೆ. ಅದರಂತೆ, ಆಸ್ಪತ್ರೆಯಲ್ಲಿ ನೋಂದಾಯಿತಗೊಂಡಿರುವ ಎಲ್ಲಾ ತಜ್ಞತೆಗಳನ್ನು (Speciality) ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡು ಫಲಾನುಭವಿಗಳಿಗೆ ಚಿಕಿತ್ಸೆ ನೀಡುವುದು.
- ನೋಂದಾಯಿತ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಾಯಿಸಲಾಗಿದೆ ಎಂದು ಬ್ಯಾನರ್/ ನಾಮಫಲಕವನ್ನು ಆಸ್ಪತ್ರೆಯ ಮುಂಭಾಗದಲ್ಲಿ ಅಳವಡಿಸುವುದು, ಇದರಿಂದ ಆಸ್ಪತ್ರೆಗೆ ಬರುವ ಫಲಾನುಭವಿಗಳಿಗೆ KASS ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ.
- ಕರ್ನಾಟಕ ಆರೋಗ್ಯ, ಸಂಜೀವಿನಿ ಯೋಜನೆಯು ನಗದುರಹಿತ ಆರೋಗ್ಯ ಯೋಜನೆಯಾಗಿದ್ದು, ಕೆಲವು ನೋಂದಾಯಿತ ಆಸ್ಪತ್ರೆಗಳು ಚಿಕಿತ್ಸೆಯ ಸಮಯದಲ್ಲಿ ಫಲಾನುಭವಿಗಳಿಂದ ಹಣವನ್ನು ಪಡೆದಿರುವ ಕುರಿತು ದೂರುಗಳು ದಾಖಲಾಗಿರುತ್ತದೆ. ಫಲಾನುಭವಿಗಳಿಂದ ನಿಗದಿತ ಚಿಕಿತ್ಸೆಗೆ ನಿಯಮಾನುಸಾರ ನಗದುರಹಿತ ಚಿಕಿತ್ಸೆಗೆ ಸಹ ಪಾವತಿ ಇಲ್ಲದೆ ಚಿಕಿತ್ಸೆ ನೀಡುವುದು.
ಮೇಲ್ಕಂಡ ಅಂಶಗಳನ್ನು ಪರಿಗಣಿಸಿಕೊಂಡು ಒಡಂಬಡಿಕೆ ಅನುಸಾರ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ನೋಂದಾಯಿತ ಆಸ್ಪತ್ರೆಗಳ ಕ್ರಮವಹಿಸಲು ಸೂಚಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿದೆ. ಯೋಜನೆಯಡಿ ರಾಜ್ಯದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗುತ್ತದೆ. ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನ ಮಾಡಲಾಗಿದೆ.
ಈ ಯೋಜನೆಯಡಿಯಲ್ಲಿ ಸರ್ಕಾರಿ ನೌಕರರ ವೇತನದಿಂದ ಮಾಸಿಕ ಕಂತು ಕಡಿತಗೊಳಿಸಿ, ಸರ್ಕಾರಿ ಮತ್ತು ನೋಂದಾಯಿತ ಆಸ್ಪತ್ರೆಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಪತಿ/ ಪತ್ನಿ ಇಬ್ಬರು ಸರ್ಕಾರಿ ನೌಕರರು ಆಗಿದ್ದರೆ ಒಬ್ಬರ ವೇತನದಿಂದ ವಂತಿಗೆ ಕಡಿತ ಮಾಡಲಾಗುತ್ತದೆ. ಯಾರ ವೇತನದಿಂದ ಕಡಿತವಾಗಬೇಕು ಎಂದು ತೀರ್ಮಾನಿಸುವ ಅಧಿಕಾರವನ್ನು ನೌಕರರಿಗೆ ನೀಡಲಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ವಂತಿಗೆ ಕಟಾವು, ಆಸ್ಪತ್ರೆಯಲ್ಲಿ ಆಗುವ ಗೊಂದಲದ ಕುರಿತು ಸರ್ಕಾರಿ ನೌಕರರು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನೌಕರರ ಸಹಾಯಕ್ಕಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದೆ.

