ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ.
ಹೈಕೋರ್ಟ್ ಆದೇಶದಂತೆ ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಅವರು ಆರು ತಿಂಗಳ ಕಾಲ ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಮಹೇಶ್ ಶೆಟ್ಟಿ ರೌಡಿಶೀಟರ್ ಎಂಬ ನೆಲೆಯಲ್ಲಿ ಪುತ್ತೂರು ಎಸಿ ಅವರು ಹೈಕೋರ್ಟ್ ನಿರ್ದೇಶನದಂತೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 16 ರಿಂದ ಸೆಪ್ಟೆಂಬರ್ 16ರ ವರೆಗೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಲಾಗಿದೆ. ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದ ಪೊಲೀಸರ ತಂಡ ಮಾರ್ಚ್ 16ರಂದು ರಾತ್ರಿ ಉಜಿರೆ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ಅವರ ಮನೆಗೆ ತೆರಳಿದ್ದು, ಆದರೆ ಮಹೇಶ್ ಶೆಟ್ಟಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯ ಗೋಡೆಗೆ ಆದೇಶ ಪ್ರತಿ ಅಂಟಿಸಲಾಗಿದೆ.
2025ರ ಸೆಪ್ಟೆಂಬರ್ 17ರಂದು ಮಹೇಶ್ ಶೆಟ್ಟಿ ಅವರನ್ನು ಮೊದಲ ಬಾರಿಗೆ ಪುತ್ತೂರು ಎಸಿ ಒಂದು ವರ್ಷದವರೆಗೆ ಗಡಿಪಾರು ಮಾಡಿದ್ದರು. ಇದರ ವಿರುದ್ಧ ಮಹೇಶ್ ಶೆಟ್ಟಿ ಹೈಕೋರ್ಟ್ ಮೊರೆ ಹೋಗಿದ್ದರು. ತಾಂತ್ರಿಕ ಲೋಪದ ಕಾರಣ ಮರು ಆದೇಶಕ್ಕೆ ಹೈಕೋರ್ಟ್ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಪುತ್ತೂರಿನ ಎಸಿ ಡಿಸೆಂಬರ್ 16ರಂದು ಎರಡನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಿದ್ದು, ಈ ಆದೇಶದ ವಿರುದ್ಧವೂ ಮಹೇಶ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಖುಲಾಸೆಯಾದ ಪ್ರಕರಣ ಉಲ್ಲೇಖಿಸಿ ಶೋಕಾಸ್ ನೋಟಿಸ್ ಗೆ ಸಲ್ಲಿಸಿದ ಅಕ್ಷೇಪಣೆ ಪರಿಗಣಿಸದೆ ಆದೇಶಿಸಲಾಗಿದೆ ಎಂದು ದೂರಿದ್ದರು. ಅವರ ಆಕ್ಷೇಪಣೆಗಳನ್ನು ಪರಿಗಣಿಸಿ 3 ವಾರದಲ್ಲಿ ಹೊಸದಾಗಿ ಆದೇಶ ಹೊರಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು.

