ಮಂಗಳೂರು: ಯಕ್ಷಗಾನ ಕಲಾವಿದರಿಗೆ ಬೆದರಿಕೆ ಹಾಕಿದ ಆರೋಪದಡಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗಕ್ಕೆ ಸಂಬಂಧಿಸಿದಂತೆ ತಮ್ಮ ಹೋರಾಟವನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಮಹೇಶ್ ತಿಮರೋಡಿ, ಯಕ್ಷಗಾನ ಕಲಾವಿದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪುತ್ತೂರು ಮಹಿಳಾ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಭಾರಿ ಚರ್ಚೆಗೆ ಕಾರಣವಾಗಿದ್ದ ಧರ್ಮಸ್ಥಳ ಪ್ರಕರಣವನ್ನೇ ಹೋಲುವ ಕಥೆ ಹೊಂದಿರುವ ‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗ ನಿರ್ಮಾಣ ಮಾಡಲಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಏಪ್ರಿಲ್ 11ರಂದು ಯಕ್ಷಗಾನ ಹಾಸ್ಯ ಕಲಾವಿಧ ಪ್ರಜ್ವಲ್ ಗುರುನಾಯನಕೆರೆಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವೇಳೆ ಕಲಾವಿದ ದಿನೇಶ್ ಶೆಟ್ಟಿಗಾರ್ ಮತ್ತು ಚಿತ್ರನಟ ಮಂದಾರ ಸುಂದರ ರೈ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಲ್ಲದೆ, ಅವರ ತಾಯಂದಿರ ಚಾರಿತ್ರ್ಯದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದರು. ಆ ಆಡಿಯೋವನ್ನು ದಿನೇಶ್ ಶೆಟ್ಟಿ ಮತ್ತು ಸುಂದರ ರೈಗೆ ಪ್ರಜ್ವಲ್ ಕಳುಹಿಸಿದ್ದು, ಅದನ್ನು ಕೇಳಿ ಕಲಾವಿದರು ತೀವ್ರವಾಗಿ ಮನನೊಂದಿದ್ದಾರೆ. ಈ ಹಿನ್ನೆಲೆ ಸುಂದರ ರೈ ನೀಡಿದ ದೂರಿನಡಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ತಿಮರೋಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ ದಿನೇಶ್ ಶೆಟ್ಟಿಗಾರ್ ತಾಯಿ ಲೀಲಾವತಿ ಶೆಟ್ಟಿಗಾರ್ ದೂರಿನಡಿ ಪುತ್ತೂರು ಮಹಿಳಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

