ಬೆಂಗಳೂರು- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಮೃತಪಟ್ಟ ಕಾಡಾನೆಯ ದಂತಗಳು ನಾಪತ್ತೆಯಾಗಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು, ಘಟನೆಗಳ ಕುರಿತು ಸಮಗ್ರ ತನಿಖೆ ನಡೆಸಿ ಒಂದು ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಪತ್ರ ಬರೆದಿದ್ದಾರೆ.
ಹುಲಿ ಸಂರಕ್ಷಿತ ಪ್ರದೇಶದ ಆಳವಾದ ಅರಣ್ಯ ಭಾಗದಲ್ಲಿಯೇ ಇಂತಹ ಘಟನೆಗಳು ನಡೆದಿರುವುದು ಅರಣ್ಯ ಇಲಾಖೆಯ ಗಸ್ತು ವ್ಯವಸ್ಥೆ, ಮೇಲ್ವಿಚಾರಣೆ ಹಾಗೂ ವನ್ಯಜೀವಿಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅರಣ್ಯ ಪ್ರದೇಶದೊಳಗೆ ಕಳ್ಳಬೇಟೆಗಾರರು ಪ್ರವೇಶಿಸಿ ಇಂತಹ ಕೃತ್ಯಗಳನ್ನು ಎಸಗಲು ಹೇಗೆ ಸಾಧ್ಯವಾಯಿತು? ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ? ಗಸ್ತು ಹಾಗೂ ನಿಗಾ ವ್ಯವಸ್ಥೆಯಲ್ಲಿ ಲೋಪಗಳಿವೆಯೇ? ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬುದರ ಕುರಿತು ಸ್ಪಷ್ಟತೆ ದೊರೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ವೈಜ್ಞಾನಿಕ ತನಿಖೆಗೆ ಸೂಚನೆ
*ವೈಜ್ಞಾನಿಕ ತನಿಖೆಗೆ ಸೂಚನೆ*
ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದರ ಹಿಂದಿನ ನೈಜ ಕಾರಣಗಳು, ಉರುಳನ್ನು ಅರಣ್ಯ ಪ್ರದೇಶದಲ್ಲಿ ಅಳವಡಿಸಿದವರು ಯಾರು, ಕಾಡಾನೆಯ ದಂತಗಳು ಹೇಗೆ ನಾಪತ್ತೆಯಾಗಿವೆ ಹಾಗೂ ಪ್ರಕರಣಗಳಲ್ಲಿ ಕಳ್ಳಬೇಟೆಗಾರರ ಕೈವಾಡವಿದೆಯೇ ಎಂಬುದನ್ನು ವೈಜ್ಞಾನಿಕ ಮತ್ತು ಸಾಕ್ಷ್ಯಾಧಾರಿತವಾಗಿ ತನಿಖೆ ನಡೆಸುವಂತೆ ಸಚಿವರು ಸೂಚಿಸಿದ್ದಾರೆ.
ಎರಡೂ ಘಟನೆಗಳ ನಡುವೆ ಯಾವುದಾದರೂ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಮರಣೋತ್ತರ ಪರೀಕ್ಷೆ, ಪ್ರಯೋಗಾಲಯ ಪರೀಕ್ಷೆ ಹಾಗೂ ಇತರ ಸಂಬಂಧಿತ ವರದಿಗಳನ್ನು ಪಡೆದು ತನಿಖೆಯಲ್ಲಿ ಪರಿಗಣಿಸಬೇಕು. ಘಟನೆ ನಡೆದ ಸ್ಥಳಗಳನ್ನು ಪರಿಶೀಲಿಸಿ ಭೌತಿಕ ಸಾಕ್ಷ್ಯಗಳು, ಛಾಯಾಚಿತ್ರಗಳು, ಸಿಬ್ಬಂದಿಯ ಹೇಳಿಕೆಗಳು, ಗಸ್ತು ಪುಸ್ತಕಗಳು ಮತ್ತು ಇತರ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ತನಿಖೆಯ ವೇಳೆ ಯಾವುದೇ ಸಾಕ್ಷ್ಯ ನಾಶವಾಗದಂತೆ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.
ಅಧಿಕಾರಿಗಳ ಕರ್ತವ್ಯಲೋಪ ಪರಿಶೀಲನೆ
*ಅಧಿಕಾರಿಗಳ ಕರ್ತವ್ಯಲೋಪ ಪರಿಶೀಲನೆ*
ಸಂಬಂಧಪಟ್ಟ ಅರಣ್ಯ ವಲಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು, ಬೀಟ್ ಸಿಬ್ಬಂದಿ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ರಾಮಲಿಂಗಾರೆಡ್ಡಿ ಅವರು ನಿರ್ದೇಶನ ನೀಡಿದ್ದಾರೆ.
ಘಟನೆ ನಡೆದ ಪ್ರದೇಶದಲ್ಲಿ ಕೊನೆಯ ಬಾರಿ ಗಸ್ತು ನಡೆಸಿದ ದಿನಾಂಕ ಮತ್ತು ಸಮಯ, ಗಸ್ತು ಪುಸ್ತಕಗಳು, ಬೀಟ್ ದಾಖಲೆಗಳು, ಸಿಬ್ಬಂದಿಯ ನಿಯೋಜನೆ, ಅರಣ್ಯ ಪ್ರವೇಶದ ಮೇಲ್ವಿಚಾರಣೆ ಹಾಗೂ ಹಿಂದಿನ ದಿನಗಳಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಲಭ್ಯವಿತ್ತೇ ಎಂಬುದನ್ನು ಪರಿಶೀಲಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಅಥವಾ ಮೇಲ್ವಿಚಾರಣೆಯ ಕೊರತೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜವಾಬ್ದಾರಿ ನಿಗದಿಪಡಿಸಿ, ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಡಿಸಿಎಫ್, ಎಸಿಎಫ್ಗಳಿಗೆ ಕ್ಷೇತ್ರ ಪರಿಶೀಲನೆ ಕಡ್ಡಾಯ
ರಾಜ್ಯದ ಎಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ಎಸಿಎಫ್) ಇಂದಿನಿಂದಲೇ ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸ್ಥಳದಲ್ಲಿಯೇ ಪರಿಶೀಲನೆ ನಡೆಸಬೇಕು ಎಂದು ಸಚಿವರು ಸೂಚಿಸಿದ್ದಾರೆ.
ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ವರದಿ ಪಡೆಯುವುದಕ್ಕೆ ಮಾತ್ರ ಸೀಮಿತವಾಗದೆ, ಅರಣ್ಯ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಗಸ್ತು ವ್ಯವಸ್ಥೆ, ಸಿಬ್ಬಂದಿಯ ಕರ್ತವ್ಯ ನಿರ್ವಹಣೆ, ವನ್ಯಜೀವಿಗಳ ಸುರಕ್ಷತೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣದ ಕುರಿತು ಪರಿಶೀಲಿಸಬೇಕು. ವಿಶೇಷವಾಗಿ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಗಸ್ತು ವ್ಯವಸ್ಥೆ ಸಮರ್ಪಕವಾಗಿದೆಯೇ, ಸಿಬ್ಬಂದಿ ನಿಗದಿತ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ಪರಿಶೀಲನೆಗಳನ್ನು ನಿರಂತರವಾಗಿ ನಡೆಸಿ
*ಕ್ಷೇತ್ರ ಪರಿಶೀಲನೆಗಳನ್ನು ನಿರಂತರವಾಗಿ ನಡೆಸಿ,
ಪರಿಶೀಲನೆಯ ವೇಳೆ ಕಂಡುಬರುವ ಲೋಪಗಳನ್ನು ತಕ್ಷಣ ಸರಿಪಡಿಸಬೇಕು. ಕ್ಷೇತ್ರ ಭೇಟಿಗಳ ವಿವರ, ಪರಿಶೀಲನೆಯ ಅಂಶಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಸೂಕ್ತ ದಾಖಲೆಗಳನ್ನು ನಿರ್ವಹಿಸಬೇಕು. ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶಗಳ ಮೇಲ್ವಿಚಾರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ರಾಮಲಿಂಗಾರೆಡ್ಡಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವನ್ಯಜೀವಿಗಳ ಸಂರಕ್ಷಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಕಳ್ಳಬೇಟೆ ಹಾಗೂ ವನ್ಯಜೀವಿಗಳ ಅಂಗಾಂಗಗಳ ಅಕ್ರಮ ಸಾಗಣೆಯನ್ನು ತಡೆಯುವುದು ಅರಣ್ಯ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳ ತನಿಖೆ ನಡೆಸಿ, ಅಧಿಕಾರಿಗಳ ಕರ್ತವ್ಯಲೋಪದ ಕುರಿತು ಪರಿಶೀಲಿಸಿ ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸಚಿವರು ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ.

