ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಏಕಾಏಕಿ ನಾಅಪತ್ತೆಯಾಗಿರುವ ಘಟನೆ ನಡೆದಿದೆ. ಆದರೆ ಅವರಿಗೆ ಸೇರಿದ ಕಾರೊಂದು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಮದನ್ ನಾಪತ್ತೆಯಾಗಿರುವ ಕುಡುಮಲ್ಲಿಗೆ ಸೊಸೈಟಿ ಸಿಇಒ. ಕುಡುಮಲ್ಲಿಗೆ ಸೊಸೈಟಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಮದನ್ ಶುಕ್ರವಾರದಂದು ತೀರ್ಥಹಳ್ಳಿಯಲ್ಲಿರುವ ತಮ್ಮ ಮನೆಯಿಂದ ಹೊರ ಹೋದವರು ವಾಪಸ್ ಆಗಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆಯೂ ಕುಟುಂಬಕ್ಕಾಗಲಿ, ಸೊಸೈಟಿಯ ಇತರ ಸಿಬ್ಬಂದಿಗಳಿಗಾಗಲಿ ಯಾವುದೇ ಮಾಹಿತಿ ಇಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ.
ಈ ನಡುವೆ ರಿಪ್ಪನ್‌ಪೇಟೆಯ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂಬಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಅನಾಮಧೇಯ ಕಾರೊಂದು ನಿಗೂಢವಾಗಿ ಪತ್ತೆಯಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಈ ಕಾರು ಕುಡುಮಲ್ಲಿಗೆ ಸೊಸೈಟಿ ಸಿಇಒ ಮದನ್ ಅವರಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ.
ಪತ್ತೆಯಾದ ಮಾರುತಿ ಸ್ವಿಫ್ಟ್ ಕಾರಿನಲ್ಲಿಯೇ ಕೀ ಬಿಡಲಾಗಿದೆ. ಕಾರಿನ ಒಳಭಾಗದಲ್ಲಿ ಮದನ್ ಅವರ ಮೊಬೈಲ್ ಫೋನ್ ಹಾಗೂ ಸೊಸೈಟಿಗೆ ಸೇರಿದ ಮಹತ್ವದ ಲೆಕ್ಕದ ಪುಸ್ತಕಗಳು ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ನಾಪತ್ತೆಯಾಗಿರುವ ಮದನ್ ಗಾಗಿ ಹುಡುಕಾಟ ನಡೆಸಿದ್ದಾರೆ.
ಮದನ್ ನಾಪತ್ತೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಇತ್ತೀಚೆಗಷ್ಟೇ ಕುಡುಮಲ್ಲಿಗೆ ಸೊಸೈಟಿಯಲ್ಲಿ ಭಾರಿ ಭ್ರಷ್ಟಾಚಾರ ಹಾಗೂ ಆರ್ಥಿಕ ಅವ್ಯವಹಾರಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.ಈ ಹಿನ್ನೆಲೆಯಲ್ಲಿ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಕುಡುಮಲ್ಲಿಗೆ ಸೊಸೈಟಿ ಸಿಇಒ ಮದನ್ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

