ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನಗಳ ಹುಂಡಿಗೆ ಹಣ, ಚಿನ್ನ-ಬೆಳ್ಳಿ, ಕಾಣಿಕೆಗಳನ್ನು ಅರ್ಪಿಸುವುದು ಸಾಮಾನ್ಯ. ಆದರೆ ಒಡಿಶಾದ ಪ್ರಸಿದ್ಧ ಮಾ ಮಜ್ಝಿಘರಿಯಾಣಿ ದೇವಸ್ಥಾನದ ಹುಂಡಿ ಎಣಿಕೆ ವೇಳೆ ಸಿಕ್ಕ ಆ ಒಂದು ಕಾಣಿಕೆ ಮಾತ್ರ ಎಲ್ಲರ ಕಣ್ಣಂಚು ತೇವಗೊಳಿಸಿದೆ. ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣಗಳ ನಡುವೆ ಸಾಲದ ಸುಳಿಯಲ್ಲಿ ಸಿಲುಕಿದ ಭಕ್ತನೊಬ್ಬ ಬರೆದ 7 ಪುಟಗಳ ಕಣ್ಣೀರ ಪತ್ರವೊಂದು ಈಗ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಾಲದ ಸುಳಿ, ನೊಂದ ಜೀವದ ಮೊರೆ ಕೊರಾಪುಟ್ ಮೂಲದ ಸುನಿಲ್ ಖಾರಾ ಎಂಬ ಭಕ್ತ ಈ ಪತ್ರವನ್ನು ಬರೆದಿದ್ದು, ದಿನಾಂಕ ಆಗಸ್ಟ್ 20 ಎಂದು ನಮೂದಿಸಲಾಗಿದೆ. ಪತ್ರದಲ್ಲಿ ತನ್ನ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿರುವ ಆತ, ತಾನು ಬರೋಬ್ಬರಿ 23 ಜನರಿಗೆ ಸಾಲ ತೀರಿಸಬೇಕಿದೆ ಎಂದು ಹೇಳಿಕೊಂಡಿದ್ದಾನೆ. “ತಾಯೇ, ಈ ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ನನಗೊಂದು ಉತ್ತಮ ಉದ್ಯೋಗ ಕರುಣಿಸು, ಆದಾಯ ಹೆಚ್ಚುವಂತೆ ಮಾಡು. ಎಲ್ಲರ ಸಾಲವನ್ನು ಪಾವತಿಸಲು ಶಕ್ತಿ ನೀಡು” ಎಂದು ಬೇಡಿಕೊಂಡಿದ್ದಾನೆ.
ಅಲ್ಲದೆ, ತನ್ನ ಆರ್ಥಿಕ ಸಂಕಷ್ಟವನ್ನು ಬಗೆಹರಿಸಿಕೊಳ್ಳಲು ಮನೆಯೊಂದನ್ನು ಮಾರಾಟ ಮಾಡುತ್ತಿದ್ದು, ಅದರ ದಾಖಲೆ ಪತ್ರಗಳ ಪ್ರಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವಂತೆ ಹರಸಬೇಕೆಂದು ಪ್ರಾರ್ಥಿಸಿದ್ದಾನೆ.
ಕುಟುಂಬದ ನೆಮ್ಮದಿಗಾಗಿ ಕಣ್ಣೀರು ಕೇವಲ ಆರ್ಥಿಕ ಸಮಸ್ಯೆ ಮಾತ್ರವಲ್ಲದೆ, ತನ್ನ ತಾಯಿ ಮತ್ತು ಸಹೋದರನ ಆರೋಗ್ಯ, ಯೋಗಕ್ಷೇಮದ ಬಗ್ಗೆಯೂ ಆತ ಪತ್ರದಲ್ಲಿ ಕಾಳಜಿ ವ್ಯಕ್ತಪಡಿಸಿದ್ದಾನೆ. ಜೀವನದಲ್ಲಿ ಸರಿಯಾದ ಹಾದಿಯಲ್ಲಿ ಸಾಗಲು ಬುದ್ಧಿ, ಮಾನಸಿಕ ಶಾಂತಿ ಮತ್ತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿಯನ್ನು ದಯಪಾಲಿಸುವಂತೆ ಕೇಳಿಕೊಂಡಿದ್ದಾನೆ. ಕೊನೆಯಲ್ಲಿ ತನ್ನೆಲ್ಲಾ ದುಃಖ, ದುಮ್ಮಾನ ಹಾಗೂ ಸಾಲದ ಹೊರೆಯನ್ನೆಲ್ಲಾ ತಾಯಿಯ ಪಾದಗಳಿಗೆ ಸಮರ್ಪಿಸುತ್ತಿರುವುದಾಗಿ ಭಾವುಕವಾಗಿ ಬರೆದುಕೊಂಡಿದ್ದಾನೆ.
ಹುಂಡಿಯಲ್ಲಿ ಹರಿದುಬಂದ ಭಾರಿ ಕಾಣಿಕೆ ದೇವಸ್ಥಾನದ ಒಟ್ಟು 9 ಹುಂಡಿಗಳನ್ನು ಸಿಸಿಟಿವಿ ಕಣ್ಗಾವಲು ಹಾಗೂ ಬಿಗಿ ಭದ್ರತೆಯ ನಡುವೆ ತೆರೆದು, ರಾಯಗಡದ ಯೂನಿಯನ್ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ಎಣಿಕೆ ಕಾರ್ಯ ನಡೆಸಲಾಯಿತು.
-
ಒಟ್ಟು ನಗದು: ₹54,15,902 (54 ಲಕ್ಷದ 15 ಸಾವಿರದ 902 ರೂ.)
-
ಬಂಗಾರ: 64 ಗ್ರಾಂ
-
ಬೆಳ್ಳಿ: 1.764 ಕೆ.ಜಿ. ಆಭರಣಗಳು
-
ವಿದೇಶಿ ಕರೆನ್ಸಿ: ಅಮೆರಿಕನ್ ಡಾಲರ್, ಒಮನ್ ರಿಯಾಲ್, ಸೌದಿ ರಿಯಾಲ್ ಮತ್ತು ಯುಎಇ ದಿರ್ಹಮ್ ಸೇರಿದಂತೆ ಹಲವು ದೇಶಗಳ ನೋಟುಗಳು ಹಾಗೂ ನಾಣ್ಯಗಳು.
ಲಕ್ಷಾಂತರ ರೂಪಾಯಿ ಮೌಲ್ಯದ ಕಾಣಿಕೆಗಳ ನಡುವೆ, ಭಕ್ತನೊಬ್ಬ ತನ್ನ ಅಸಹಾಯಕತೆ ಮತ್ತು ಅಚಲ ನಂಬಿಕೆಯನ್ನು ಅಕ್ಷರ ರೂಪಕ್ಕಿಳಿಸಿ ತಾಯಿಯ ಮಡಿಲಿಗೆ ಹಾಕಿದ ಈ ಪತ್ರವು ಹುಂಡಿ ಎಣಿಕೆ ಸಿಬ್ಬಂದಿ ಹಾಗೂ ಭಕ್ತವೃಂದದ ಮನ ಕಲಕಿದೆ.

