ರಾಯಚೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಬಳ್ಳಾರಿ ಚಲೋ ಹೆಸರಿನಲ್ಲಿ ಬಿಜೆಪಿ ಬೃಹತ್ ಪಾದಯಾತ್ರೆಗೆ ಚಾಲನೆ ದೊರೆತಿದೆ.
ಲಿಂಗಸಗೂರಿನಲ್ಲಿ ಬೃಹತ್ ವೇದಿಕೆಯಲ್ಲಿ ಬಿಜೆಪಿ ನಾಯಕರು ಕಹಳೆಯೂದುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಇಂದಿನಿಂದ ಆರಂಭವಾಗಿರುವ ಪಾದಯಾತ್ರೆ 10 ದಿನಗಳ ಕಾಲ ನಡೆಯಲಿದ್ದು, ಒಟ್ಟು 175 ಕಿ.ಮೀ. ಸಾಗಲಿದೆ. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ 9 ವಿಧಾನಸಭಾ ಕ್ಷೇತ್ರಗಳಾದ ಲಿಂಗಸುಗೂರು, ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ ಮತ್ತು ಕುಡತಿನಿ ಮಾರ್ಗವಾಗಿ ಸಾಗಲಿದೆ.
ಪಾಯಾತ್ರೆಯಲ್ಲಿ ಇಂದು ಬಿಜೆಪಿ ನಾಯಕರು 12 ಕಿ.ಮೀ ಸಾಗಲಿದ್ದಾರೆ. ರಾತ್ರಿ ಸಂತೆಕಲ್ಲೂರು ಘನಮಠೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಿತ್ಯ ಪಾದಯತರೆ ಮಧ್ಯೆ ಬಿಜೆಪಿ ನಾಯಕರು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.
ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆ.ಅಶೋಕ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಪಾಲ್ಗೊಂಡಿದ್ದಾರೆ. ಪಾದಯಾತ್ರೆ ಮೂಲಕ ಬಳ್ಳಾರಿ ತಲುಪಲಿರುವ ಬಿಜೆಪಿ ನಾಯಕರು 10ನೇ ದಿನ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ.

